ಹೊಸದಿಗಂತ ಮಡಿಕೇರಿ:
ವಾಹನದ ಮೂಲ ಸ್ವರೂಪವನ್ನು ಬದಲಾಯಿಸಿ, ಕರ್ಕಶ ಶಬ್ದ ಬರುವ ಸೈಲೆನ್ಸರ್ ಅಳವಡಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಮಾರುತಿ ಜಿಪ್ಸಿ ವಾಹನವೊಂದನ್ನು ಮಡಿಕೇರಿ ಸಂಚಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಗರದಲ್ಲಿ KA 01 NG 2730 ನೋಂದಣಿ ಸಂಖ್ಯೆಯ ಜಿಪ್ಸಿ ವಾಹನವೊಂದು ಅತೀ ವೇಗವಾಗಿ ಹಾಗೂ ಕರ್ಕಶ ಶಬ್ದ ಮಾಡುತ್ತಾ ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಸಂಚರಿಸುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಮಡಿಕೇರಿ ಸಂಚಾರಿ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ, ಮೈತ್ರಿ ಜಂಕ್ಷನ್ ಬಳಿ ಈ ವಾಹನವನ್ನು ತಡೆದು ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆಯ ವೇಳೆ ವಾಹನದ ಮೂಲ ಸ್ವರೂಪವನ್ನು ಬದಲಾಯಿಸಿರುವುದು ಮತ್ತು ಆರ್‌ಟಿಒ ಅನುಮತಿ ಪಡೆಯದೆ ಕರ್ಕಶ ಶಬ್ದದ ಸೈಲೆನ್ಸರ್ ಅಳವಡಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ವಾಹನವನ್ನು ವಶಕ್ಕೆ ಪಡೆದ ಪೊಲೀಸರು, ಬಿಎನ್‌ಎಸ್ ಮತ್ತು ಐಎಂವಿ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ತಿಳಿಸಿದ್ದಾರೆ.
ಯಾವುದೇ ವಾಹನ ಸವಾರರು ಆರ್‌ಸಿ ನಿಯಮಗಳನ್ನು ಮೀರಿ ವಾಹನಗಳ ಸ್ವರೂಪ ಬದಲಾಯಿಸುವುದು, ಕರ್ಕಶ ಹಾರ್ನ್ ಅಥವಾ ಸೈಲೆನ್ಸರ್ ಅಳವಡಿಸುವುದು ಹಾಗೂ ವೀಲಿಂಗ್ ಮಾಡುವುದು ಕಂಡುಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕೆಂದು ಎಸ್‌ಪಿ ಅವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.



