February 4, 2026
Wednesday, February 4, 2026
spot_img

ಆಧಾರ್ ಕಾರ್ಡ್ ಇತ್ತು, ಬಸ್ ಫ್ರೀ ಇತ್ತು: ಮನೆ ಬಿಟ್ಟ ಮಕ್ಕಳು ಸಿಕ್ಕಿದ್ದು ಭದ್ರಾವತಿಯಲ್ಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟ್ಯೂಷನ್‌ಗೆ ಹೋಗಲು ನಿರಾಕರಿಸಿದ್ದಕ್ಕೆ ಪೋಷಕರು ಬೈದಿದ್ದೇ ತಡ, ಮುನಿಸಿಕೊಂಡ 13 ವರ್ಷದ ಬಾಲಕಿಯೊಬ್ಬಳು ತನ್ನ 9 ವರ್ಷದ ತಮ್ಮನ ಜೊತೆಗೂಡಿ ನಗರವನ್ನೇ ಬಿಟ್ಟ ಘಟನೆ ಬೆಳಕಿಗೆ ಬಂದಿದೆ. ಸರ್ಕಾರದ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯವಿರುವುದನ್ನೇ ಬಳಸಿಕೊಂಡ ಈ ಬಾಲಕಿ, ಬೆಂಗಳೂರಿನಿಂದ ನೇರವಾಗಿ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದಳು.

ಮಾರತಹಳ್ಳಿಯ ಅಶ್ವತ್ಥನಗರದ ಈ ಮಕ್ಕಳು ಮನೆಯಿಂದ ಹೊರಟು ಮಾರತಹಳ್ಳಿ ಬ್ರಿಡ್ಜ್ ಮೂಲಕ ಮೆಜೆಸ್ಟಿಕ್ ತಲುಪಿದ್ದಾರೆ. ಬಾಲಕಿಯ ಬಳಿ ಆಧಾರ್ ಕಾರ್ಡ್ ಇದ್ದಿದ್ದರಿಂದ ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಹಾಗೂ ತಮ್ಮನನ್ನು ಯಾವುದೇ ಟಿಕೆಟ್ ಇಲ್ಲದೆ ಕರೆದುಕೊಂಡು ಶಿವಮೊಗ್ಗದತ್ತ ಪ್ರಯಾಣಿಸಿದ್ದಾರೆ. ಮಕ್ಕಳು ಕಾಣೆಯಾದ ಆತಂಕದಲ್ಲಿದ್ದ ಪೋಷಕರು ಕೂಡಲೇ HAL ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣದ ಗಂಭೀರತೆ ಅರಿತ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಮಕ್ಕಳು ಮೆಜೆಸ್ಟಿಕ್‌ನತ್ತ ತೆರಳಿರುವುದನ್ನು ಪತ್ತೆ ಹಚ್ಚಿದರು. ರಾಜ್ಯಾದ್ಯಂತ ಪೊಲೀಸ್ ಇಲಾಖೆಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಫೋಟೋಗಳನ್ನು ಹಂಚಿಕೊಂಡು ಅಲರ್ಟ್ ಘೋಷಿಸಲಾಯಿತು.

ಇದನ್ನೂ ಓದಿ:

ಮಕ್ಕಳು ಶಿವಮೊಗ್ಗದ ಭದ್ರಾವತಿಯಲ್ಲಿ ಓಡಾಡುತ್ತಿದ್ದಾಗ, ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಫೋಟೋ ನೋಡಿದ್ದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಪೊಲೀಸರು ಮಕ್ಕಳನ್ನು ವಶಕ್ಕೆ ಪಡೆದು, ಬೆಂಗಳೂರಿನ HAL ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊನೆಗೂ ಅಕ್ಕ-ತಮ್ಮನನ್ನು ಸುರಕ್ಷಿತವಾಗಿ ಕರೆತಂದು ಪೋಷಕರಿಗೆ ಒಪ್ಪಿಸುವ ಮೂಲಕ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !