February 4, 2026
Wednesday, February 4, 2026
spot_img

ದಲಿತ ನಾಯಕರ ‘ಒಗ್ಗಟ್ಟಿನ ಮಂತ್ರ’: ಸಿದ್ದರಾಮಯ್ಯ ಸರ್ಕಾರಕ್ಕೆ ಸ್ವಪಕ್ಷೀಯರಿಂದಲೇ ಸೆಡ್ಡು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರದ ವಿಶೇಷ ಅಧಿವೇಶನದ ನಡುವೆಯೇ ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ ಭಾರಿ ರಾಜಕೀಯ ಸಂಚಲನವೊಂದು ಸೃಷ್ಟಿಯಾಗಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ನಡೆದ ಎಸ್‌ಸಿ/ಎಸ್‌ಟಿ ಸಚಿವರು ಮತ್ತು ಶಾಸಕರ ಮಹತ್ವದ ಸಭೆಯು ರಾಜ್ಯ ರಾಜಕಾರಣದ ಮುಂದಿನ ದಿಕ್ಕನ್ನು ಬದಲಿಸುವ ಮುನ್ಸೂಚನೆ ನೀಡಿದೆ.

ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಸೂಚನೆ ಎನ್ನಲಾದ ಈ ಸಭೆಯಲ್ಲಿ ಸಚಿವರಾದ ಮುನಿಯಪ್ಪ, ಡಾ. ಹೆಚ್.ಸಿ. ಮಹದೇವಪ್ಪ, ಶಿವರಾಜ ತಂಗಡಗಿ ಮತ್ತು ಕೆ.ಎನ್. ರಾಜಣ್ಣ ಸೇರಿದಂತೆ 20ಕ್ಕೂ ಹೆಚ್ಚು ಜನಪ್ರತಿನಿಧಿಗಳು ಭಾಗಿಯಾಗಿದ್ದರು. ಮೇಲ್ನೋಟಕ್ಕೆ ಇದು ಅನುದಾನದ ಕುರಿತಾದ ಸಭೆಯಂತೆ ಕಂಡರೂ, ವಾಸ್ತವದಲ್ಲಿ ಇದು ಸಮುದಾಯದ ನಾಯಕರ ‘ಪವರ್ ಪಾಲಿಟಿಕ್ಸ್’ ಎಂದು ವಿಶ್ಲೇಷಿಸಲಾಗುತ್ತಿದೆ.

SCSP-TSP (ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪ ಯೋಜನೆ) ಹಣವನ್ನು ಬೇರೆ ಯೋಜನೆಗಳಿಗೆ ಬಳಸುತ್ತಿರುವುದಕ್ಕೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಸಮುದಾಯದ ಹಣವನ್ನು ಅದೇ ಉದ್ದೇಶಕ್ಕೆ ಬಳಸಬೇಕೆಂದು ನಾಯಕರು ಪಟ್ಟು ಹಿಡಿದಿದ್ದಾರೆ.

ಸಭೆಯ ಒಳಗಡೆ ದಲಿತ ಮುಖ್ಯಮಂತ್ರಿ ಸ್ಥಾನದ ಕುರಿತು ಹೈಕಮಾಂಡ್ ಮುಂದೆ ಹಕ್ಕು ಮಂಡಿಸುವ ಬಗ್ಗೆ ಗಂಭೀರ ಸಮಾಲೋಚನೆ ನಡೆದಿದೆ ಎನ್ನಲಾಗಿದ್ದು, ಇದು ಅಧಿಕಾರ ಹಂಚಿಕೆಯ ಚರ್ಚೆಗೆ ತುಪ್ಪ ಸುರಿದಂತಾಗಿದೆ.

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಈ ಗುಂಪು ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಲು ನಿರ್ಧರಿಸಿದೆ. ಬಜೆಟ್‌ನಲ್ಲಿ ಸಮುದಾಯಕ್ಕೆ ವಿಶೇಷ ಕೊಡುಗೆ ನೀಡದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !