“ಇಷ್ಟು ವಯಸ್ಸಾಯ್ತು… ಇನ್ನೂ ಮದುವೆ ಆಗ್ಲಿಲ್ಲವಾ?” ಅನ್ನೋ ಪ್ರಶ್ನೆ ಕೇಳಿದಾಗ, ನಿಜ್ವಾಗ್ಲೂ ಅಷ್ಟೊಂದು ತಡವಾಗಿದೆಯೋ ಅನ್ನೋ ಅನುಮಾನ ಹುಟ್ಟುತ್ತೆ.
ಸಮಾಜಕ್ಕೆ timing ತುಂಬಾ ಇಷ್ಟ. ಈ ವಯಸ್ಸಿಗೆ ಓದು ಮುಗಿಸಬೇಕು, ಅಷ್ಟರಲ್ಲಿ ಕೆಲಸ, ನಂತರ ಮದುವೆ, ಮಕ್ಕಳು, ಸೆಟಲ್‌ಡ್ ಲೈಫ್. ಒಂದು ರೆಡಿಯಾದ ಟೈಮ್‌ಟೇಬಲ್. ಅದನ್ನ ಫಾಲೋ ಮಾಡದಿದ್ರೆ, ಜೀವನವೇ ತಪ್ಪು ಟ್ರ್ಯಾಕ್‌ಗೆ ಹೋದಂಥ ಫೀಲ್ ಮಾಡಿಸ್ತಾರೆ. ಆದರೆ ಪ್ರಶ್ನೆ ಒಂದೇ – ಈ ಟೈಮ್‌ಟೇಬಲ್ ಯಾರದ್ದು? ನಮ್ಮದಾ, ಸಮಾಜದದಾ?
ಜೀವನ ಅಂದ್ರೆ ರೈಲು ಅಲ್ಲ. ಎಲ್ಲರೂ ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ, ಒಂದೇ ಸಮಯಕ್ಕೆ ಹತ್ತಬೇಕೆಂದಿಲ್ಲ. ಕೆಲವರು ಬೇಗ ಓಡ್ತಾರೆ, ಕೆಲವರು ನಿಧಾನ. ಕೆಲವರಿಗೆ ತಿರುವುಗಳು ಜಾಸ್ತಿ, ಕೆಲವರಿಗೆ ವಿರಾಮಗಳು. ಅದನ್ನ ತಡ ಅಂತ ಕರೆಯೋದು ಸುಲಭ. ಆದರೆ ಆ ತಡದಲ್ಲೇ ಕೆಲವರು ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ ಅನ್ನೋದು ಯಾರಿಗೂ ಕಾಣಿಸಲ್ಲ.
ಇದನ್ನೂ ಓದಿ:
ಸಮಾಜದ timing ಅಂದ್ರೆ ಹೊರಗಿನಿಂದ ಬಂದ ಒತ್ತಡ. ಒಳಗಿನ timing ಅಂದ್ರೆ ನಾವು ರೆಡಿ ಆಗಿರುವ ಕ್ಷಣ. ಮದುವೆ, ಕೆಲಸ, ಕನಸು—ಇವೆಲ್ಲಾ ಗಂಟೆಯನ್ನ ನೋಡಿ ನಡೆಯೋದಿಲ್ಲ. ಮನಸ್ಸು, ಪರಿಸ್ಥಿತಿ, ಧೈರ್ಯ ಎಲ್ಲವೂ ಒಂದೇ ಲೈನ್‌ನಲ್ಲಿ ಬಂದಾಗ ಮಾತ್ರ ಅದು ಅರ್ಥಪೂರ್ಣವಾಗುತ್ತೆ.
ಹೋಲಿಕೆ ಅನ್ನೋದು ಇಲ್ಲಿ ದೊಡ್ಡ ವಿಷ. ಈ ಹೋಲಿಕೆಗಳು ನಮ್ಮ ಸಂತೋಷವನ್ನು ನಿಧಾನವಾಗಿ ಕುಗ್ಗಿಸುತ್ತವೆ. ಆದರೆ ಅವರ ಕಥೆ ಬೇರೆ, ನಮ್ಮ ಕಥೆ ಬೇರೆ. ಒಂದೇ ಸಮಯದಲ್ಲಿ ಶುರು ಆದ ಜೀವನಗಳೂ, ಒಂದೇ ಕಡೆ ಮುಗಿಯೋದಿಲ್ಲ.
ಸಮಾಜ ಹೇಳಿದ timing ಪಾಲಿಸದೇ ಇದ್ದರೆ, ನೀವು ಸೋತವರಲ್ಲ. ನಿಮ್ಮ ಜೀವನದ ಗಡಿಯಾರ ನೀವು ಹಿಡಿದಿದ್ದೀರಾ ಅಷ್ಟೇ. ಸರಿಯಾದ ಸಮಯ ಅಂದ್ರೆ, ಎಲ್ಲರೂ ಹೇಳಿದ ಸಮಯ ಅಲ್ಲ ನಿಮಗೆ ಶಾಂತಿ ಕೊಡುವ ಸಮಯ. ಅದನ್ನ ಆಯ್ಕೆ ಮಾಡೋ ಧೈರ್ಯವೇ, ನಿಜವಾದ ಬೆಳವಣಿಗೆ.



