ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯದಿಂದ ರಿಲೀಫ್ ಸಿಗದೆ ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಕೊನೆಗೂ ತಿಹಾರ್ ಜೈಲಿಗೆ ಶರಣಾಗಿದ್ದಾರೆ. ಗುರುವಾರ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಅವರು ಜೈಲು ಅಧಿಕಾರಿಗಳ ಮುಂದೆ ಹಾಜರಾಗಿದ್ದು, ಅಗತ್ಯ ಪ್ರಕ್ರಿಯೆ ಬಳಿಕ ಅವರನ್ನು ಬಂಧನದಲ್ಲಿರಿಸಲಾಗಿದೆ.
ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸಲ್ಲಿಸಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿತ್ತು. ರಾಜ್‌ಪಾಲ್ ಯಾದವ್ ಹಾಗೂ ಅವರ ಪತ್ನಿ ನೀಡಿದ್ದ ಚೆಕ್ ಬೌನ್ಸ್ ಆಗಿರುವುದಾಗಿ ಕಂಪನಿ ಆರೋಪಿಸಿತ್ತು. ಈ ಪ್ರಕರಣದಲ್ಲಿ 2018ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ದಂಪತಿಯನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ನಂತರ 2019ರಲ್ಲಿ ಸೆಷನ್ ಕೋರ್ಟ್ ಕೂಡಾ ಅದೇ ತೀರ್ಪನ್ನು ಸಮರ್ಥಿಸಿತ್ತು.
ಇದನ್ನೂ ಓದಿ:
ತೀರ್ಪು ವಿರುದ್ಧವಾಗಿ ರಾಜ್‌ಪಾಲ್ ಯಾದವ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಪ್ರಕರಣವನ್ನು ಬಗೆಹರಿಸಿಕೊಳ್ಳಲು ಸಮಯ ಕೇಳಿದ್ದರು. ಸಂಧಾನಕ್ಕೆ ಅವಕಾಶ ನೀಡಲು ನ್ಯಾಯಾಲಯವು 2024ರಲ್ಲಿ ತಾತ್ಕಾಲಿಕ ರಿಲೀಫ್ ನೀಡಿತ್ತು. ಆದರೆ ಇಷ್ಟೊಂದು ಸಮಯ ಕಳೆದರೂ ಬಾಕಿ ಹಣವನ್ನು ಹಿಂತಿರುಗಿಸದ ಹಿನ್ನೆಲೆ, ಹೆಚ್ಚುವರಿ ಸಮಯ ನೀಡಲು ಹೈಕೋರ್ಟ್ ನಿರಾಕರಿಸಿತು.
ನಿಗದಿತ ಅವಧಿಯೊಳಗೆ ಶರಣಾಗಲು ನ್ಯಾಯಾಲಯ ಸೂಚನೆ ನೀಡಿದ್ದರಿಂದ ಅವರು ಜೈಲಿಗೆ ಹಾಜರಾದರು. ವ್ಯಕ್ತಿಯ ವೃತ್ತಿ ಅಥವಾ ಖ್ಯಾತಿ ಆಧಾರವಾಗಿ ವಿಶೇಷ ಸಡಿಲಿಕೆ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದ್ದು, ಕಾನೂನಿನ ಮುಂದೆ ಎಲ್ಲರೂ ಸಮಾನ ಎಂಬ ಸಂದೇಶ ನೀಡಿದೆ.



