February 6, 2026
Friday, February 6, 2026
spot_img

ಕೋಗಿಲು ಲೇಔಟ್‌ ತೆರವು | ಎಷ್ಟು ಜನರ ಮನೆ ತೆರವು ಮಾಡಲಾಗಿದೆ? ವರದಿ ನೀಡಲು ಹೈಕೋರ್ಟ್‌ ಸೂಚನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಕೋಗಿಲು ಲೇಔಟ್‌ ತೆರವು ಪ್ರಕರಣದ ಕುರಿತು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿರುವುದು ಮತ್ತು ನಿರ್ಗತಿಕರಾಗಿರುವವರ ಮಾಹಿತಿಯನ್ನು ಒಳಗೊಂಡ ವರದಿ ಸಲ್ಲಿಸಲು ಅಮಿಕಸ್‌ ಕ್ಯೂರಿಗೆ ಹೈಕೋರ್ಟ್‌ ಮಹತ್ವದ ಸೂಚನೆ ನೀಡಿದೆ.

ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹನಾ ಮತ್ತು ಆರೀಫ್ ಬೇಗಂ ಅಕ್ರಮವಾಗಿ ತೆರವು ಕಾರ್ಯಾಚರಣೆ ನಡೆಸಿರುವುದರಿಂದ ಅದನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ಹೈಕೋರ್ಟ್‌ ಈ ಸೂಚನೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರನ್ನೊಳಗೊಂಡ ವಿಭಾಗೀಯ ಪೀಠ, ತೆರವು ಕಾರ್ಯಾಚರಣೆಯಿಂದ ಎಷ್ಟು ಮಂದಿ ನಿರ್ಗತಿಕರಾಗಿದ್ದಾರೆ? ಎಷ್ಟು ಜನರ ಮನೆ ತೆರವು ಮಾಡಲಾಗಿದೆ? ಎಷ್ಟು ಗುಡಿಸಲುಗಳನ್ನು ನಾಶಪಡಿಸಲಾಗಿದೆ? ಎಷ್ಟು ಕುಟುಂಬಗಳು ನಿರ್ಗತಿಕವಾಗಿವೆ? ಪುನರ್ವಸತಿಯ ವ್ಯವಸ್ಥೆ ಹೇಗಿದೆ? ಮುಂತಾದ ಅಂಶಗಳನ್ನು ಒಳಗೊಂಡು ವಿವರವಾದ ವರದಿ ಸಲ್ಲಿಸಬೇಕು ಎಂದು ಸೂಚಿಸಿತು. ಜತೆಗೆ ಮಾರ್ಚ್‌ 12ಕ್ಕೆ ವಿಚಾರಣೆ ಮುಂದೂಡಿದೆ.

ಇನ್ನು ಫಕೀರ್‌ ಲೇಔಟ್‌ನಲ್ಲಿ 1990ರಿಂದ ನೆಲೆಸಿರುವ 15 ಮಂದಿಯ ನಿವಾಸಗಳನ್ನು ತೆರವು ಮಾಡಲಾಗಿದೆ ಎಂಬ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಪ್ರತ್ಯೇಕವಾಗಿ ನೋಟಿಸ್‌ ಜಾರಿ ಮಾಡಿದೆ. ಕೋಗಿಲು ಬಡಾವಣೆಯ ರಬಿಯಾ, ಮೊಹಮ್ಮದ್‌ ರಫೀಕ್‌ ಸೇರಿದಂತೆ 15 ಮಂದಿ ಸಲ್ಲಿಸಿರುವ ಈ ಕುರಿತು ಅರ್ಜಿ ಸಲ್ಲಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !