February 6, 2026
Friday, February 6, 2026
spot_img

ಸ್ಟೇರಿಂಗ್ ರಾಡ್ ಕಟ್ ಆಗಿ ಗದ್ದೆಗೆ ವಾಲಿ ನಿಂತ ಬಸ್: ಪ್ರಯಾಣಿಕರು ಸೇಫ್!

ಹೊಸದಿಗಂತ ವರದಿ, ಅಂಕೋಲಾ:

ಪ್ರಯಾಣಿಕರನ್ನು ತುಂಬಿಕೊಂಡು ಸಾಗುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ಸಿನ ಸ್ಟೇರಿಂಗ್ ರಾಡ್ ತುಂಡಾಗಿ ಬಸ್ಸು ರಸ್ತೆ ಬದಿಯ ಗದ್ದೆ ಬಯಲಿನಲ್ಲಿ ವಾಲಿ ನಿಂತ ಘಟನೆ ತಾಲೂಕಿನ ಹಾರವಾಡದಲ್ಲಿ ಸಂಭವಿಸಿದ್ದು ಅದೃಷ್ಟವಶಾತ್ ಬಸ್ಸು ಪಲ್ಟಿಯಾಗುವುದು ತಪ್ಪಿದೆ.

ಮುಂಜಾನೆ ಅಂಕೋಲಾದಿಂದ ಹಾರವಾಡಕ್ಕೆ ಸಾಗುವ ಅಂಕೋಲಾ ಘಟಕಕ್ಕೆ ಸೇರಿರುವ ಬಸ್ಸಿನಲ್ಲಿ ಶಾಲಾ ಶಿಕ್ಷಕರು ಸೇರಿದಂತೆ ಹಲವು ಪ್ರಯಾಣಿಕರು ಇದ್ದರು ಎನ್ನಲಾಗುತ್ತಿದ್ದು ರಾಷ್ಟ್ರೀಯ ಹೆದ್ದಾರಿಯ ತಿರುವಿನ ಹಾರವಾಡ ಕ್ರಾಸಿನಿಂದ ಸ್ವಲ್ಪ ಮುಂದಕ್ಕೆ ಸಾಗುತ್ತಿದ್ದಂತೆ ಬಸ್ಸಿನ ಸ್ಟೇರಿಂಗ್ ರಾಡ್ ತುಂಡಾಗಿ ಬಸ್ಸು ರಸ್ತೆ ಬದಿಯ ಗದ್ದೆ ಪ್ರದೇಶದಲ್ಲಿ ವಾಲಿಕೊಂಡು ನಿಲ್ಲುವಂತಾಯಿತು.

ಬಸ್ ಚಾಲಕ ಈ ಕುರಿತಂತೆ ಘಟಕಕ್ಕೆ ಮಾಹಿತಿ ನೀಡಿದ್ದರಿಂದ ಎರಡು ಕ್ರೇನುಗಳನ್ನು ತಂದು ಬಸ್ಸನ್ನು ಮೇಲೆತ್ತಿ ತಾಂತ್ರಿಕ ಸಿಬ್ಬಂದಿಗಳು ಬಸ್ಸನ್ನು ತಾತ್ಕಾಲಿಕವಾಗಿ ರಿಪೇರಿ ಮಾಡಿ ಮುಂದೆ ಸಾಗಲು ಅವಕಾಶ ಮಾಡಿಕೊಟ್ಟರೂ ಸ್ವಲ್ಪ ಮುಂದೆ ಸಾಗಿದ ಬಸ್ಸು ಮತ್ತೆ ಕೆಟ್ಟು ನಿಂತು ಬಸ್ಸಿನ ಬರುವಿಕೆಗೆ ಕಾಯುತ್ತಿದ್ದ ಸ್ಥಳೀಯ ಜನರು ಸಾರಿಗೆ ಸಂಸ್ಥೆಯ ಬಸ್ಸಿನ ದುಃಸ್ಥಿತಿಯ ಕುರಿತಂತೆ ಅಸಮಾಧಾನ ವ್ಯಕ್ತಪಡಿಸುವಂತಾಯಿತು.

ತಾಲೂಕಿನ ಗ್ರಾಮೀಣ ಭಾಗಗಳಿಗೆ ಓಡುವ ಈ ಬಸ್ಸು ಈ ಹಿಂದೆ ಸಹ ಹಲವು ಬಾರಿ ಕೆಟ್ಟು ನಿಂತ ಘಟನೆ ನಡೆದಿತ್ತಾದರೂ ಸರಿಯಾದ ತಾಂತ್ರಿಕ ನಿರ್ವಹಣೆ ಕೈಗೊಳ್ಳದೇ ಗುಜರಿ ಸ್ಥಿತಿಯಲ್ಲಿರುವ ಬಸ್ಸುಗಳನ್ನು ಓಡಿಸುವುದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ.

ಬಸ್ಸುಗಳ ತಾಂತ್ರಿಕ ಸಮಸ್ಯೆಗಳ ಕುರಿತಂತೆ ಚಾಲಕ,ನಿರ್ವಾಹಕರು ಅಧಿಕಾರಿಗಳಿಗೆ ತಿಳಿಸಿದರೂ ದುರುಸ್ಥಿ ಕುರಿತಂತೆ ಗಮನ ನೀಡಲಾಗುತ್ತಿಲ್ಲ ಸಿಬ್ಬಂದಿಗಳು ತಾಂತ್ರಿಕ ದೋಷವಿರುವ ವಾಹನಗಳನ್ನು ಓಡಿಸುವ ಅನಿವಾರ್ಯ ಸ್ಥಿತಿ ಬಂದೊದಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಈ ಹಿಂದೆ ಸಹ ತಾಲೂಕಿನ ಹಲವಡೆ ಬಸ್ಸುಗಳು ಕೆಟ್ಟು ನಿಂತ ಘಟನೆಗಳು ನಡೆದಿದ್ದವು. ಮುಂಜಾನೆಯ ಬಸ್ಸು ಸರಿಯಾದ ಸಮಯಕ್ಕೆ ಬಾರದ ಕಾರಣ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಹಾರವಾಡ ಗಾಬೀತವಾಡದ ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ಮನವಿ ನೀಡಿದ್ದರು ಮನವಿ ನೀಡಿದ ಮರುದಿನವೇ ಮುಂಜಾನೆಯ ಬಸ್ಸು ಕೆಟ್ಟು ನಿಂತು ಶೈಕ್ಷಣಿಕ ಸಂಸ್ಥೆಗಳಿಗೆ ತೆರಳಬೇಕಾದ ವಿದ್ಯಾರ್ಥಿಗಳು ಬದಲಿ ವ್ಯವಸ್ಥೆಯ ಮೂಲಕ ತೆರಳುವಂತಾಗಿರುವುದು ವಿಪರ್ಯಾಸ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !