February 7, 2026
Saturday, February 7, 2026
spot_img

ಆರು ತಿಂಗಳು ಮಳೆ ಸುರಿದರೂ ಸೇರದ ಜಲ:ಹಾರಂಗಿ ಜಲಾಶಯದ ನೀರಿನ ಸಂಗ್ರಹ ಮಟ್ಟ ಭಾರೀ ಕುಸಿತ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: :

ಕುಶಾಲನಗರ ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಜಲಾಶಯದ ನೀರಿನ ಸಂಗ್ರಹ ಮಟ್ಟ ಕಳೆದ ಬಾರಿಗಿಂತ ಭಾರೀ ಕುಸಿತವಾಗಿರುವುದು ಕಂಡು ಬಂದಿದೆ.

ಈ ಬಾರಿ ಜಿಲ್ಲೆಯಲ್ಲಿ ಸತತವಾಗಿ ಆರು ತಿಂಗಳುಗಳ ಕಾಲ ಮಳೆ ಸುರಿದು ಅಣೆಕಟ್ಟೆಗೆ ಹೆಚ್ಚು ನೀರು ಬಂದಿದ್ದರೂ, ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸುವುದರೊಂದಿಗೆ ಇಲಾಖೆಯ ನಿಯಮಾನುಸಾರ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲಾಗುತ್ತಿತ್ತು.

ಆದರೆ ಈ ಬಾರಿ ಅಕ್ಟೋಬರ್ ತಿಂಗಳವರೆಗೂ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ತುಂತುರು ಮಳೆಯಿಂದಾಗಿ ಅಣೆಕಟ್ಟೆಗೆ ಒಳ ಹರಿವಿನ ಪ್ರಮಾಣ ಕಡಿಮೆಯಾಗಿದ್ದು, ಜೊತೆಗೆ ಅಚ್ಚುಕಟ್ಟು ಪ್ರದೇಶದ 1.35 ಲಕ್ಷ ಹೆಕ್ಟೇರ್ ಖಾರಿಫ್ ಬೆಳೆಗೆ ಡಿಸೆಂಬರ್ ‌ಕೊನೆಯ ವಾರದವರೆಗೆ ನಾಲೆಗಳ ಮೂಲಕ ನೀರನ್ನು ಹರಿಸಲಾಗಿದೆ.
ಪ್ರಸಕ್ತ ಅಚ್ಚುಕಟ್ಟು ಪ್ರದೇಶಗಳಲ್ಲಿ ಬೆಳೆಯ ಕಟಾವು ಮಗಿದ ಹಿನ್ನೆಲೆಯಲ್ಲಿ ನಾಲೆಯಲ್ಲಿ ಹರಿಸಲಾಗುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಜನವರಿ ತಿಂಗಳ ಅಂತ್ಯಕ್ಕೆ ನೀರಿನ ಸಂಗ್ರಹ ಮಟ್ಟದಲ್ಲಿ ಭಾರೀ ಕುಸಿತವಾಗಿರುವುದು ಕಂಡು ಬಂದಿದೆ.

ಇದೀಗ ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಸಮತೋಲನದ ವ್ಯವಸ್ಥೆ ಅಡಿಯಲ್ಲಿ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲಾಗುವುದು ಎಂದು ಅಣೆಕಟ್ಟೆಯ ಉಸ್ತುವಾರಿ ಇಂಜಿನಿಯರ್ ಸೌಮ್ಯ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !