February 9, 2026
Monday, February 9, 2026
spot_img

LIFE | Self Love ಅನ್ನೋದು ಸ್ವಾರ್ಥನಾ? ಅಥವಾ ನಮ್ಮ ಅಗತ್ಯತೆನಾ?

ನಮ್ಮನ್ನು ನಾವು ಪ್ರೀತಿಸೋದು ಅಂದ್ರೆ ಇಂದಿಗೂ ಹಲವರಿಗೆ ಒಂದು ತಪ್ಪು ಅರ್ಥದಲ್ಲೇ ಕಾಣಿಸುತ್ತದೆ. “ತನ್ನ ಬಗ್ಗೆ ಹೆಚ್ಚು ಯೋಚಿಸುತ್ತಾನೆ”, “ತನ್ನನ್ನೇ ನೋಡ್ಕೊಳ್ಳುತ್ತಾಳೆ” ಅನ್ನೋ ಮಾತುಗಳು ಕೇಳಿದಾಗ, ಅದನ್ನ ಸ್ವಾರ್ಥ ಅಂತಲೇ ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ನಿಜವಾಗಿ ನೋಡಿದರೆ, Self Love ಅನ್ನೋದು ಸ್ವಾರ್ಥ ಅಲ್ಲ, ಅದು ಬದುಕಿಗೆ ಬೇಕಾದ ಒಂದು ಮೂಲಭೂತ ಅಗತ್ಯ. ನಾವು ನಮ್ಮನ್ನು ಅರ್ಥಮಾಡಿಕೊಳ್ಳದೆ, ನಮ್ಮ ಮನಸ್ಸಿನ ಮಾತು ಕೇಳದೆ, ಯಾವಾಗಲೂ ಇತರರಿಗೋಸ್ಕರ ಮಾತ್ರ ಬದುಕುತ್ತಾ ಹೋದರೆ, ಒಂದು ಹಂತದಲ್ಲಿ ನಾವು ಯಾರು ಅನ್ನೋದನ್ನೇ ಮರೆತುಬಿಡುತ್ತೇವೆ.

ಜೀವನದಲ್ಲಿ ಎಲ್ಲರನ್ನೂ ಖುಷಿಪಡಿಸಬೇಕು, ಎಲ್ಲರಿಗೂ ಒಳ್ಳೆಯವರಾಗಿರಬೇಕು ಅನ್ನೋ ಒತ್ತಡದಲ್ಲಿ, ಹಲವರು ತಮ್ಮ ಭಾವನೆಗಳನ್ನು, ತಮ್ಮ ಆಸೆಗಳನ್ನು, ತಮ್ಮ ನೋವುಗಳನ್ನು ಕೂಡ ಮೌನವಾಗಿಯೇ ಒಳಗೊಳಗೆ ನುಂಗುತ್ತಿರುತ್ತಾರೆ. ಹೊರಗೆ ನಗು ಇದ್ದರೂ, ಒಳಗೆ ಖಾಲಿತನ ಬೆಳೆದಿರುತ್ತದೆ. ಅಂಥ ಸಮಯದಲ್ಲಿ ನಮ್ಮನ್ನು ನಾವು ನೋಡಿಕೊಳ್ಳೋದು, ನಮ್ಮ ಮನಸ್ಸಿಗೆ ಸ್ವಲ್ಪ ಸಮಯ ಕೊಡುವುದು, ನಮಗೆ ನೋವು ಕೊಡುವ ವಿಷಯಗಳಿಂದ ದೂರ ಇರುವುದೇ Self Love. ಅದು ಯಾರನ್ನೂ ದೂರ ಮಾಡೋದು ಅಲ್ಲ, ಅದು ನಮ್ಮನ್ನೇ ಕಳೆದುಕೊಳ್ಳದಂತೆ ನೋಡಿಕೊಳ್ಳೋದು.

ಸ್ವಾರ್ಥ ಅನ್ನೋದು ಅಂದರೆ, ಇತರರ ಭಾವನೆಗಳನ್ನು ಗಮನಿಸದೆ, ನಮ್ಮ ಲಾಭಕ್ಕೆ ಮಾತ್ರ ಯೋಚಿಸುವುದು. ಆದರೆ Self Love ಅಂದರೆ, ನಮ್ಮ ಮೌಲ್ಯವನ್ನು ನಾವು ಅರಿತುಕೊಳ್ಳುವುದು. ನಮಗೂ ನೋವಾಗುತ್ತದೆ, ನಮಗೂ ವಿಶ್ರಾಂತಿ ಬೇಕು, ನಮಗೂ ಗೌರವ ಬೇಕು ಅನ್ನೋದನ್ನು ಒಪ್ಪಿಕೊಳ್ಳುವುದು. ಇತರರಿಗೆ ಕೊಡೋ ಪ್ರೀತಿ, ಕಾಳಜಿ, ಸಮಯದಷ್ಟೇ ನಮ್ಮಿಗೂ ಕೊಡುವುದು. ಇದರಿಂದ ನಾವು ಕೆಟ್ಟವರಾಗೋದಿಲ್ಲ, ಬದಲಾಗಿ ಒಳಗಿಂದ ಬಲಿಷ್ಠರಾಗುತ್ತೇವೆ.

ಇದನ್ನೂ ಓದಿ:

ನಮ್ಮನ್ನು ನಾವು ಪ್ರೀತಿಸಿಕೊಳ್ಳುವವರು, ಇತರರನ್ನೂ ನಿಜವಾಗಿ ಪ್ರೀತಿಸಬಲ್ಲರು. ಏಕೆಂದರೆ ಅವರು ಖಾಲಿಯಾಗಿರುವ ಮನಸ್ಸಿನಿಂದ ಅಲ್ಲ, ತುಂಬಿದ ಮನಸ್ಸಿನಿಂದ ಸಂಬಂಧಗಳನ್ನು ಕಟ್ಟುತ್ತಾರೆ. ಎಲ್ಲರಿಗೂ ಒಪ್ಪಿಗೆ ಸಿಗಬೇಕು ಅನ್ನೋ ಅಗತ್ಯ ಕಡಿಮೆಯಾಗುತ್ತದೆ, “ನಾನು ಸಾಕು” ಅನ್ನೋ ಭಾವನೆ ನಿಧಾನವಾಗಿ ಬೆಳೆತೊಡಗುತ್ತದೆ. ಅದೇ ಆತ್ಮವಿಶ್ವಾಸ, ಅದೇ ಶಾಂತಿ.

ಆದ್ದರಿಂದ Self Love ಅನ್ನೋದು ಸ್ವಾರ್ಥ ಅಲ್ಲ. ಅದು ನಮ್ಮ ಮನಸ್ಸಿಗೆ, ನಮ್ಮ ಆತ್ಮಕ್ಕೆ ಕೊಡುವ ಒಂದು ಚಿಕ್ಕ ಆರೈಕೆ. ನಾವು ನಮ್ಮನ್ನು ಕಾಪಾಡಿಕೊಳ್ಳದಿದ್ದರೆ, ನಮ್ಮನ್ನು ಯಾರೂ ಕಾಪಾಡಲಾರರು. ನಮ್ಮನ್ನೇ ನಾವು ಅರ್ಥ ಮಾಡಿಕೊಂಡಾಗ ಮಾತ್ರ, ಜೀವನದ ಪ್ರತಿಯೊಂದು ಸಂಬಂಧವೂ ಇನ್ನಷ್ಟು ಸುಂದರವಾಗಿ ಕಾಣಲು ಶುರುವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !