October 21, 2026
Wednesday, October 21, 2026
spot_img

ಕಪ್ಪು ಎಮ್ಮೆಗೆ ಬಿಳಿ ಬಣ್ಣದ ಹೋರಿ ಕರು ಜನನ: ಗ್ರಾಮಸ್ಥರಲ್ಲಿ ಅಚ್ಚರಿ!

ಹೊಸದಿಗಂತ ವರದಿ ಸುರಪುರ:

ಸಾಮಾನ್ಯವಾಗಿ ಎಮ್ಮೆಗೆ ಎಮ್ಮೆ ಕರು ಜನಿಸುವುದು ಸಹಜ. ಆದರೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಕಪ್ಪು ಬಣ್ಣದ ಎಮ್ಮೆಯ ಹೊಟ್ಟೆಯಲ್ಲಿ ಬಿಳಿ ಬಣ್ಣದ ಹೋರಿ ಕರು ಜನಿಸಿರುವುದು ಗ್ರಾಮಸ್ಥರಲ್ಲಿ ಅಚ್ಚರಿ ಹಾಗೂ ಕುತೂಹಲ ಮೂಡಿಸಿದೆ.

ನಾರಾಯಣಪುರ ಗ್ರಾಮದ ಪರಶುರಾಮ ಎಂಬುವವರಿಗೆ ಸೇರಿದ ಎಮ್ಮೆಯು ಸುಮಾರು 10 ತಿಂಗಳ ಗರ್ಭಧಾರಣೆಯ ಬಳಿಕ ಕರುವಿಗೆ ಜನ್ಮ ನೀಡಿದೆ. ವಿಶೇಷವೆಂದರೆ, ಕಪ್ಪು ಬಣ್ಣದ ಎಮ್ಮೆಗೆ ಬಿಳಿ ಬಣ್ಣದ ಹೋರಿ ಕರು ಜನಿಸಿರುವುದು ಸ್ಥಳೀಯರ ಗಮನ ಸೆಳೆದಿದೆ.

ಮಾಲೀಕರು ಹೊಲದಲ್ಲಿ ಎಮ್ಮೆ ಹಾಗೂ ಹೋರಿಯನ್ನು ಒಂದೇ ಸ್ಥಳದಲ್ಲಿ ಕಟ್ಟುತ್ತಿದ್ದರು ಎನ್ನಲಾಗಿದ್ದು, ಹೋರಿಯ ಸಂಪರ್ಕದಿಂದಲೇ ಕರು ಜನಿಸಿರಬಹುದು ಎಂಬ ಶಂಕೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಆದರೆ, ಕರು ಜನನದ ನಿಖರವಾದ ಕಾರಣವನ್ನು ಪಶುವೈದ್ಯಕೀಯ ತಜ್ಞರ ಪರಿಶೀಲನೆಯಿಂದಷ್ಟೇ ತಿಳಿಯಬೇಕಿದೆ.

ಕಪ್ಪು ಎಮ್ಮೆಗೆ ಬಿಳಿ ಬಣ್ಣದ ಹೋರಿ ಕರು ಜನಿಸಿರುವ ವಿಷಯ ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅಪರೂಪದ ಬಣ್ಣದ ಕರುವನ್ನು ನೋಡಲು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

Must Read