ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಮೆರವಣಿಗೆಯು ಅತ್ಯಂತ ವೈಭವೋಪೇತವಾಗಿ ಮತ್ತು ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಸಂಜೆ 4.28ರ ಶುಭ ಮೀನ ಲಗ್ನದಲ್ಲಿ ತಾಯಿ ಚಾಮುಂಡೇಶ್ವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಈ ಭವ್ಯ ಜಂಬೂಸವಾರಿಗೆ ಚಾಲನೆ ನೀಡಿದ್ದರು. ಇದೇ ಮೊದಲ ಬಾರಿಗೆ ಕ್ಯಾಪ್ಟನ್ ಪ್ರಶಾಂತ ಆನೆಯು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಅರಮನೆಯಿಂದ ಬನ್ನಿಮಂಟಪ ಮೈದಾನದವರೆಗೆ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ್ದಾನೆ.
ಗಣ್ಯಾತಿಗಣ್ಯರ ಉಪಸ್ಥಿತಿ
ಪುಷ್ಪಾರ್ಚನೆ ವೇಳೆ ರಾಜವಂಶಸ್ಥ ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಕೇರಳ ಸಿಎಂ ವಿ. ಡಿ. ಸತೀಶನ್, ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಗಜಪಡೆಯ ಆನೆಗಳ ಹಂಚಿಕೆ
ಮೆರವಣಿಗೆಯಲ್ಲಿ ಒಟ್ಟು 12 ಆನೆಗಳು ಭಾಗವಹಿಸಿದ್ದವು. ಚಿನ್ನದ ಅಂಬಾರಿ ಹೊತ್ತ ಪ್ರಶಾಂತನಿಗೆ ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ರೂಪಾ ಸಾಥ್ ನೀಡಿದವು. ನಿಶಾನೆ ಆನೆಯಾಗಿ ಗಜಪಡೆಯನ್ನು ಅಭಿಮನ್ಯು ಮುನ್ನಡೆಸಿದರೆ, ನೌಪತ್ ಆನೆಯಾಗಿ ಗೋಪಿ ಹೆಜ್ಜೆ ಹಾಕಿತು. ಉಳಿದಂತೆ ಮಹೇಂದ್ರ, ಶ್ರೀರಾಮ, ಶ್ರೀಕಂಠ, ಚೈತ್ರಾ, ಲಕ್ಷ್ಮೀ, ಸುಗ್ರೀವ ಹಾಗೂ ಏಕಲವ್ಯ ಆನೆಗಳು ಭಾಗಿಯಾಗಿದ್ದವು. 18 ಬಾರಿ ದಸರಾದಲ್ಲಿ ಪಾಲ್ಗೊಂಡಿದ್ದ ಪ್ರಶಾಂತನಿಗೆ ಇದು ಮೊದಲ ಅಂಬಾರಿ ಹೊಣೆಗಾರಿಕೆಯಾಗಿದ್ದರೆ, 6 ಬಾರಿ ಅಂಬಾರಿ ಹೊತ್ತಿದ್ದ ಅಭಿಮನ್ಯು ಈ ಬಾರಿ ನಿಶಾನೆ ಆನೆಯಾಗಿದ್ದು ವಿಶೇಷವಾಗಿತ್ತು.
ವಿದೇಶಿ ರಾಯಭಾರಿಗಳ ಭಾಗಿ
ಭವ್ಯ ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ, ಸ್ವಿಟ್ಜರ್ಲೆಂಡ್, ಇಟಲಿ, ಮಲೇಷಿಯಾ ಹಾಗೂ ನೆದರ್ಲ್ಯಾಂಡ್ ಸೇರಿದಂತೆ 11 ದೇಶಗಳ ರಾಯಭಾರಿಗಳು ಮತ್ತು ವಿದೇಶಿ ಗಣ್ಯರು ಅರಮನೆ ಆವರಣದಲ್ಲಿ ಉಪಸ್ಥಿತರಿದ್ದರು.
ಸಿನಿ ತಾರೆಯರ ಮೆರುಗು
ಸ್ಯಾಂಡಲ್‌ವುಡ್‌ನ ಪ್ರಮುಖ ತಾರೆಯರಾದ ಜಯಮಾಲಾ, ರವಿಚಂದ್ರನ್, ಕಿಚ್ಚ ಸುದೀಪ್, ರಮೇಶ್ ಅರವಿಂದ್, ಡಾಲಿ ಧನಂಜಯ್, ಶ್ರೀಮುರಳಿ, ಗಣೇಶ್, ರುಕ್ಮಿಣಿ ವಸಂತ್, ಸಪ್ತಮಿ ಗೌಡ, ರಾಗಿಣಿ ದ್ವಿವೇದಿ ಸೇರಿದಂತೆ ಚಿತ್ರರಂಗದ ದಂಡೇ ಮೈಸೂರು ಅರಮನೆ ಆವರಣದಲ್ಲಿ ದಸರಾ ವೀಕ್ಷಿಸಲು ನೆರೆದಿತ್ತು.
ಸ್ತಬ್ಧಚಿತ್ರಗಳು ಮತ್ತು ಜಾನಪದ ಕಲೆ
ಜಂಬೂಸವಾರಿಗೆ ಮುನ್ನ ನಡೆದ ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳ ಹಾಗೂ ಸರ್ಕಾರದ ಒಟ್ಟು 60 ಆಕರ್ಷಕ ಸ್ತಬ್ಧಚಿತ್ರಗಳು ಪ್ರದರ್ಶನಗೊಂಡವು. ಇದರೊಂದಿಗೆ ಡೊಳ್ಳು ಕುಣಿತ, ಗೊರವರ ಕುಣಿತ, ಕೀಲುಕುದುರೆ, ವೀರಗಾಸೆ ಮತ್ತು ಯಕ್ಷಗಾನ ಸೇರಿದಂತೆ ನಾಡಿನ ಸಾಂಪ್ರದಾಯಿಕ ಕಲಾತಂಡಗಳು ಹಾದಿಯುದ್ದಕ್ಕೂ ನೆರೆದಿದ್ದ ಲಕ್ಷಾಂತರ ಜನರ ಕಣ್ಮನ ಸೆಳೆದವು.
ಹಾದಿಯ ಇಕ್ಕೆಲಗಳಲ್ಲಿ ಕಿಕ್ಕಿರಿದು ತುಂಬಿದ್ದ ಲಕ್ಷಾಂತರ ದೇಶ-ವಿದೇಶಿ ಪ್ರವಾಸಿಗರು ಮತ್ತು ಭಕ್ತಾದಿಗಳು ಜೈಕಾರ ಹಾಕುತ್ತಾ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ಪುನೀತರಾದರು.



