October 18, 2026
Sunday, October 18, 2026
spot_img

ಸೆಶೆಲ್ಸ್‌ಗೆ 175 ಮಿಲಿಯನ್ ಡಾಲರ್ ಆರ್ಥಿಕ ಪ್ಯಾಕೇಜ್ ಘೋಷಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದ್ವೀಪ ರಾಷ್ಟ್ರ ಸೆಶೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹೆರ್ಮಿನಿ ಜೊತೆಗೆ ಮಾತುಕತೆ ನಡೆಸಿದ್ದು, ಈ ವೇಳೆ ಸೆಶೆಲ್ಸ್‌ಗೆ 175 ಮಿಲಿಯನ್ ಡಾಲರ್ ಮೊತ್ತದ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

ಹೆರ್ಮಿನಿ ಆರು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಸೆಶೆಲ್ಸ್ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತಕ್ಕೆ ಪ್ರಮುಖ ಕಡಲ ನೆರೆಯ ರಾಷ್ಟ್ರವಾಗಿದೆ.

ಈ ವೇಳೆ ಮಾತನಾಡಿದ ಮೋದಿ, ಭಾರತ ಮತ್ತು ಸೆಶೆಲ್ಸ್ ಕೇವಲ ಭೌಗೋಳಿಕತೆಯಿಂದ ಸಂಪರ್ಕ ಹೊಂದಿಲ್ಲ. ಆದರೆ ಇತಿಹಾಸ, ನಂಬಿಕೆ ಮತ್ತು ಭವಿಷ್ಯದ ದೃಷ್ಟಿಯಿಂದ ಸಂಪರ್ಕ ಹೊಂದಿವೆ. ಅಭಿವೃದ್ಧಿ ಪಾಲುದಾರಿಕೆಯು ಭಾರತ-ಸೆಶೆಲ್ಸ್ ಸಂಬಂಧಗಳಲ್ಲಿ ಬಲವಾದ ಅಡಿಪಾಯ ಎಂದಿದ್ದಾರೆ.

ಎಲ್ಲಾ ಪ್ರಯತ್ನಗಳು ಸೆಶೆಲ್ಸ್‌ನ ಆದ್ಯತೆಗಳು ಮತ್ತು ಅಗತ್ಯಗಳನ್ನು ಆಧರಿಸಿವೆ.ಇಂದು ನಾವು 175 ಮಿಲಿಯನ್ ಡಾಲರ್ ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ನ್ನು ಘೋಷಿಸಿದ್ದೇವೆ ಎಂದು ತಿಳಿಸಿದರು.

ಈ ಪ್ಯಾಕೇಜ್ ಸಾಮಾಜಿಕ ವಸತಿ, ವೃತ್ತಿಪರ ತರಬೇತಿ, ಆರೋಗ್ಯ, ರಕ್ಷಣೆ ಮತ್ತು ಕಡಲ ಭದ್ರತೆಯಂತಹ ಕ್ಷೇತ್ರಗಳಲ್ಲಿ ಸೂಕ್ತ ಯೋಜನೆಗಳಿಗೆ ಸಾಥ್ ನೀಡಲಿದೆ. ಉಭಯ ರಾಷ್ಟ್ರಗಳ ನಡುವಿನ ಜನರ ಬಾಂಧವ್ಯ ಕೂಡಾ ಹೆಚ್ಚಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸೆಶೆಲ್ಸ್‌ನಲ್ಲಿ ನೆಲೆಸಿರುವ ಭಾರತೀಯ ಸಮುದಾಯ ಸೆಶೆಲ್ಸ್‌ನ ಸಾಮಾಜಿಕ ಮತ್ತು ಆರ್ಥಿಕ ಜೀವನಕ್ಕೆ ಗಮನಾರ್ಹ ಕೊಡುಗೆಯನ್ನು ನೀಡಿದೆ. ಇದೇ ವೇಳೆ ಅವರು ಕೂಡಾ ನಮ್ಮ ಸ್ನೇಹವನ್ನು ಪೀಳಿಗೆಯಿಂದ ಪೀಳಿಗೆಗೆ ಬಲಪಡಿಸಿದ್ದಾರೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Must Read