ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವರ್ಷ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮದ ನಡುವೆ ನಡೆದ ಕಹಿ ಘಟನೆಯಿಂದಾಗಿ ತನ್ನ ತವರು ಕ್ರೀಡಾಂಗಣವನ್ನು ತಾತ್ಕಾಲಿಕವಾಗಿ ಬದಲಾಯಿಸಲು ಮುಂದಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಈಗ ದೊಡ್ಡ ಹಿನ್ನಡೆಯಾಗಿದೆ. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣವನ್ನು ಬಳಸಿಕೊಳ್ಳುವ ಆರ್‌ಸಿಬಿ ಕನಸಿಗೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ತಣ್ಣೀರೆರಚಿದೆ.
2025ರ ಐಪಿಎಲ್ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಆರ್‌ಸಿಬಿಯ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಕ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 11 ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು. ಈ ಭೀಕರ ಘಟನೆಯಿಂದ ಪಾಠ ಕಲಿತಿರುವ ಮ್ಯಾನೇಜ್‌ಮೆಂಟ್, 2026ರ ಟೂರ್ನಿಯ ಐದು ಪಂದ್ಯಗಳನ್ನು ಸುರಕ್ಷತೆಯ ದೃಷ್ಟಿಯಿಂದ ಬೇರೆಡೆಗೆ ಸ್ಥಳಾಂತರಿಸಲು ನಿರ್ಧರಿಸಿತ್ತು.
ತನ್ನ ಐದು ತವರು ಪಂದ್ಯಗಳಿಗಾಗಿ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದ ಮೇಲೆ ಆರ್‌ಸಿಬಿ ಕಣ್ಣಿಟ್ಟಿತ್ತು. ಇದಕ್ಕಾಗಿ ಎನ್‌ಒಸಿ ನೀಡುವಂತೆ ಮನವಿ ಕೂಡ ಸಲ್ಲಿಸಿತ್ತು. ಆದರೆ, ಈ ಕ್ರೀಡಾಂಗಣವನ್ನು ಮುಂಬೈ ಇಂಡಿಯನ್ಸ್ ತಂಡವು ಬಳಸಿಕೊಳ್ಳುವ ಸಾಧ್ಯತೆ ಇರುವುದರಿಂದ, ಆರ್‌ಸಿಬಿಗೆ ಅನುಮತಿ ನೀಡಲು ಎಂಸಿಎ ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಪುಣೆ ಕ್ರೀಡಾಂಗಣವು ರಾಜಸ್ಥಾನ್ ರಾಯಲ್ಸ್ ಪಾಲಾಗಿರುವುದರಿಂದ ಆರ್‌ಸಿಬಿಗೆ ಆಯ್ಕೆಗಳು ಕ್ಷೀಣಿಸಿವೆ.
ಒಂದೆಡೆ ಕ್ರೀಡಾಂಗಣದ ಹುಡುಕಾಟ ವಿಫಲವಾಗುತ್ತಿದ್ದರೆ, ಮತ್ತೊಂದೆಡೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪಂದ್ಯಗಳನ್ನು ಬೆಂಗಳೂರಿನಲ್ಲೇ ಉಳಿಸಿಕೊಳ್ಳಲು ತೀವ್ರ ಪ್ರಯತ್ನ ನಡೆಸುತ್ತಿದೆ.
ಇದನ್ನೂ ಓದಿ:
ಇಂದು ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದ ಸಮಿತಿಯು ಸುರಕ್ಷತಾ ವರದಿಯನ್ನು ಅಂತಿಮಗೊಳಿಸಲಿದೆ. ನಾಳೆ ಗೃಹ ಸಚಿವರು ಮತ್ತು ಉನ್ನತ ಅಧಿಕಾರಿಗಳ ನಡುವೆ ಮಹತ್ವದ ಸಭೆ ನಡೆಯಲಿದ್ದು, ಕ್ರೀಡಾಂಗಣದ ಹಣೆಬರಹ ನಿರ್ಧಾರವಾಗಲಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಮತ್ತು ಸುರಕ್ಷತಾ ಕ್ರಮಗಳು ಬಿಗಿಗೊಂಡರೆ, 2026ರ ಐಪಿಎಲ್ ಉದ್ಘಾಟನಾ ಪಂದ್ಯವು ನಮ್ಮ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಮೊಳಗಲಿದೆ.



