September 30, 2026
Wednesday, September 30, 2026
spot_img

ಬೆಂಗಳೂರು ಪಿಜಿಗಳಿಗೆ ಬಿಬಿಎಂಪಿ ಚಾಟಿ: ಅಶುಚಿಯಾಗಿರೋ ಮೆಸ್‌ಗಳಿಗೆ ಬಿತ್ತು ಬೀಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿಯ ಪಿಜಿಗಳಲ್ಲಿನ ಅಶುಚಿತ್ವ ಮತ್ತು ನಿಯಮ ಉಲ್ಲಂಘನೆಗಳ ವಿರುದ್ಧ ಬೆಂಗಳೂರು ದಕ್ಷಿಣ ವಲಯದ ಪಾಲಿಕೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿದ್ದ 19 ಪಿಜಿಗಳ ಅಡುಗೆ ಕೋಣೆಗಳಿಗೆ ಅಧಿಕಾರಿಗಳು ಬೀಗ ಜಡಿದಿದ್ದು, ಒಟ್ಟು 89 ಪಿಜಿಗಳಿಗೆ 61 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ಜಯನಗರ, ಬಿಟಿಎಂ ಲೇಔಟ್‌, ಬೊಮ್ಮನಹಳ್ಳಿ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ವಾಸಿಸುವ ಈ ವಸತಿಗೃಹಗಳಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲದಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿದೆ.

ಏನೇನು ಲೋಪಗಳು ಕಂಡುಬಂದಿವೆ?

ಎಫ್‌ಎಸ್‌ಎಸ್‌ಎಐ ಪರವಾನಗಿ ಇಲ್ಲದಿರುವುದು ಮತ್ತು ಅಶುಚಿಯಾದ ಅಡುಗೆ ಮನೆಗಳು.

ಕುಡಿಯುವ ನೀರಿನ ಸಮಸ್ಯೆ, ಸರಿಯಿಲ್ಲದ ಶೌಚಾಲಯ ವ್ಯವಸ್ಥೆ.

ಸಿಸಿಟಿವಿ ಕ್ಯಾಮೆರಾಗಳ ಕೊರತೆ ಹಾಗೂ ಅಗ್ನಿಶಾಮಕ ಸಾಧನಗಳ ಅನುಪಸ್ಥಿತಿ.

ಈ ಬಗ್ಗೆ ಕಠಿಣ ಕ್ರಮ ಕೈಗೊಂಡಿರುವ ಅಧಿಕಾರಿಗಳು, ಲೋಪದೋಷಗಳು ಕಂಡುಬಂದ ಪಿಜಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ನಿಯಮ ಉಲ್ಲಂಘನೆ ಮುಂದುವರಿದರೆ ಪರವಾನಗಿ ರದ್ದುಪಡಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.

Must Read