ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಸಂಸತ್ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ‘ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ’, ಜಯಭೇರಿಯ ನಂತರವೂ ಯಾವುದೇ ಸಾರ್ವಜನಿಕ ಆಚರಣೆ ಅಥವಾ ವಿಜಯೋತ್ಸವ ಮಾಡದಿರಲು ನಿರ್ಧರಿಸಿದೆ. ಈ ಮೂಲಕ ರಾಜಕೀಯದಲ್ಲಿ ಹೊಸ ಸಂಪ್ರದಾಯಕ್ಕೆ ಪಕ್ಷ ಮುನ್ನುಡಿ ಬರೆದಿದೆ.
ಸಾಮಾನ್ಯವಾಗಿ ಚುನಾವಣಾ ಗೆಲುವೆಂದರೆ ಸಿಹಿ ಹಂಚುವುದು, ಪಟಾಕಿ ಸಿಡಿಸುವುದು ಮತ್ತು ಮೆರವಣಿಗೆ ಮಾಡುವುದು ವಾಡಿಕೆ. ಆದರೆ, ಬಿಎನ್‌ಪಿ ಮಾತ್ರ ಶುಕ್ರವಾರ ದೇಶಾದ್ಯಂತ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನಾ ಸಭೆಗಳನ್ನು ಹಮ್ಮಿಕೊಂಡಿದೆ. ಈ ಸಭೆಗಳಲ್ಲಿ ದಿವಂಗತ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಆತ್ಮಕ್ಕೆ ಶಾಂತಿ ಕೋರಲು ಹಾಗೂ ದೇಶದ ಜನರ ಏಳಿಗೆಗಾಗಿ ಪ್ರಾರ್ಥಿಸಲು ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಕೇವಲ ಮಸೀದಿಗಳಷ್ಟೇ ಅಲ್ಲದೆ, ದೇವಾಲಯ ಮತ್ತು ಚರ್ಚ್‌ಗಳಲ್ಲೂ ದೇಶದ ಶಾಂತಿಗಾಗಿ ಪ್ರಾರ್ಥಿಸುವಂತೆ ಕರೆ ನೀಡುವ ಮೂಲಕ ಧಾರ್ಮಿಕ ಸಾಮರಸ್ಯದ ಸಂದೇಶವನ್ನು ಪಕ್ಷ ರವಾನಿಸಿದೆ.
ಸುಮಾರು 17 ವರ್ಷಗಳ ಕಾಲ ದೇಶಭ್ರಷ್ಟರಾಗಿದ್ದ ತಾರಿಕ್ ರೆಹಮಾನ್ ಈಗ ಬಾಂಗ್ಲಾದೇಶದ ಪ್ರಧಾನಿಯಾಗಲು ಸಜ್ಜಾಗಿದ್ದಾರೆ. ಲಭ್ಯವಿರುವ ಮಾಹಿತಿಯಂತೆ, ಬಿಎನ್‌ಪಿ ಈಗಾಗಲೇ 151 ಸ್ಥಾನಗಳನ್ನು ಗೆದ್ದಿದ್ದು, 120ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮತ್ತೊಂದೆಡೆ, ಜಮಾತ್-ಎ-ಇಸ್ಲಾಮಿ 43 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.



