April 16, 2026
Thursday, April 16, 2026
spot_img

RCB vs LSG | ಚಿನ್ನಸ್ವಾಮಿಯಲ್ಲಿ ಲಕ್ನೋ ವಿರುದ್ಧ RCB ದರ್ಬಾರ್: ಅಂಕಪಟ್ಟಿಯಲ್ಲಿ ಟಾಪ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ರೋಚಕ ಪಂದ್ಯದಲ್ಲಿ ಆರ್​ಸಿಬಿ ತಂಡವು ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

147 ರನ್‌ಗಳ ಗುರಿಯನ್ನು ಆರ್‌ಸಿಬಿ ಕೇವಲ 15.1 ಓವರ್‌ಗಳಲ್ಲಿ ಬೆನ್ನಟ್ಟಿ, ಸತತ ಎರಡನೇ ಗೆಲುವು ದಾಖಲಿಸಿತು. ಈ ಜಯದೊಂದಿಗೆ ತಂಡವು 5 ಪಂದ್ಯಗಳಲ್ಲಿ 4 ಗೆಲುವುಗಳಿಂದ 8 ಅಂಕಗಳನ್ನು ಸಂಪಾದಿಸಿ ಅಗ್ರಸ್ಥಾನಕ್ಕೇರಿದೆ.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್‌ಸಿಬಿ ಬೌಲರ್‌ಗಳು ಆರಂಭದಿಂದಲೇ ಲಕ್ನೋ ಮೇಲೆ ಒತ್ತಡ ಹೇರಿದರು. ಪರಿಣಾಮವಾಗಿ ಲಕ್ನೋ ತಂಡ 20 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು. ಆಯುಷ್ ಬಡೋನಿ 38 ಮತ್ತು ಮುಕುಲ್ ಚೌಧರಿ 39 ರನ್‌ಗಳೊಂದಿಗೆ ಹೋರಾಟ ನಡೆಸಿದರೂ ದೊಡ್ಡ ಮೊತ್ತ ಕಟ್ಟಲು ಸಾಧ್ಯವಾಗಲಿಲ್ಲ. ಆರ್‌ಸಿಬಿ ಪರ ರಸಿಕ್ ದಾರ್ ನಾಲ್ಕು ವಿಕೆಟ್ ಪಡೆದು ಮಿಂಚಿದರೆ, ಭುವನೇಶ್ವರ್ ಕುಮಾರ್ ಮೂರು ವಿಕೆಟ್ ಕಬಳಿಸಿದರು.

ಇದನ್ನೂ ಓದಿ:

147 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ವಿರಾಟ್ ಕೊಹ್ಲಿ ವೇಗದ ಆರಂಭ ನೀಡಿದರು. ಅವರು 34 ಎಸೆತಗಳಲ್ಲಿ 49 ರನ್ ಗಳಿಸಿ ತಂಡದ ಗೆಲುವಿಗೆ ಬಲವಾದ ಅಡಿಪಾಯ ಹಾಕಿದರು. ಬಳಿಕ ರಜತ್ ಪಾಟಿದಾರ್ 27 ಹಾಗೂ ಜಿತೇಶ್ ಶರ್ಮಾ 23 ರನ್‌ಗಳ ಚುರುಕಿನ ಆಟದಿಂದ ಪಂದ್ಯವನ್ನು ಆರ್‌ಸಿಬಿ ಪರ ತಿರುಗಿಸಿದರು. ಅಂತಿಮವಾಗಿ ಟಿಮ್ ಡೇವಿಡ್ ಮತ್ತು ರೊಮಾರಿಯೊ ಶೆಫರ್ಡ್ ತಂಡವನ್ನು 15.1 ಓವರ್‌ಗಳಲ್ಲಿ ಗೆಲುವಿನ ಗುರಿ ತಲುಪಿಸಿದರು. ಈ ಜಯದೊಂದಿಗೆ ಚಿನ್ನಸ್ವಾಮಿಯಲ್ಲಿ ಲಕ್ನೋ ವಿರುದ್ಧದ ಹಿಂದಿನ ಸೋಲುಗಳಿಗೂ ಆರ್‌ಸಿಬಿ ತೆರೆ ಎಳೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !