February 13, 2026
Friday, February 13, 2026
spot_img

ನಭಕ್ಕೆ ರಫೇಲ್, ಭೂಮಿಗೆ ಮಿಸೈಲ್: ಭಾರತೀಯ ಸೇನೆಯ ಆಧುನೀಕರಣಕ್ಕೆ ‘ಡಿಎಸಿ’ ಗ್ರೀನ್ ಸಿಗ್ನಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ರಕ್ಷಣಾ ವ್ಯವಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬಲಿಷ್ಠಗೊಳಿಸಲು ಕೇಂದ್ರ ಸರ್ಕಾರ ಭರ್ಜರಿ ತಯಾರಿ ನಡೆಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಖರೀದಿ ಮಂಡಳಿ ನಿನ್ನೆ (ಫೆಬ್ರವರಿ 12, ಗುರುವಾರ) ಬರೊಬ್ಬರಿ 3.6 ಲಕ್ಷ ಕೋಟಿ ರೂಪಾಯಿ ಮೊತ್ತದ ವಿವಿಧ ಯುದ್ಧ ಸಾಮಗ್ರಿಗಳ ಖರೀದಿಗೆ ‘ಅವಶ್ಯಕತೆಯ ಮಾನ್ಯತೆ’ ನೀಡಿದೆ.

ರಷ್ಯಾದಿಂದ ಸುಮಾರು 10,000 ಕೋಟಿ ರೂ. ವೆಚ್ಚದಲ್ಲಿ 288 ಎಸ್-400 ಕ್ಷಿಪಣಿಗಳನ್ನು ಖರೀದಿಸಲಾಗುತ್ತಿದೆ. ಇದರಲ್ಲಿ 120 ಅಲ್ಪ ಶ್ರೇಣಿಯ ಹಾಗೂ 168 ದೂರ ವ್ಯಾಪ್ತಿಯ ಕ್ಷಿಪಣಿಗಳಿದ್ದು, ಇವುಗಳನ್ನು ‘ಫಾಸ್ಟ್ ಟ್ರ್ಯಾಕ್ ಪ್ರೊಸೆಸ್’ ಮೂಲಕ ತುರ್ತಾಗಿ ಪಡೆಯಲಾಗುವುದು.

ವಾಯುಪಡೆಗೆ 114 ರಫೇಲ್ ಯುದ್ಧವಿಮಾನಗಳ ಸೇರ್ಪಡೆಗೆ ಅನುಮೋದನೆ ಸಿಕ್ಕಿದೆ. ವಿಶೇಷವೆಂದರೆ, ಈ ಪೈಕಿ 90 ವಿಮಾನಗಳನ್ನು ಭಾರತದಲ್ಲೇ ಉತ್ಪಾದಿಸುವ ಮೂಲಕ ‘ಆತ್ಮನಿರ್ಭರ ಭಾರತ’ ಯೋಜನೆಗೆ ಒತ್ತು ನೀಡಲಾಗಿದೆ.

ನೌಕಾಸೇನೆಗಾಗಿ ಪಿ-8ಐ ವಿಚಕ್ಷಣಾ ವಿಮಾನಗಳು ಮತ್ತು ಮರೈನ್ ಗ್ಯಾಸ್ ಟರ್ಬೈನ್ ಜನರೇಟರ್‌ಗಳ ಖರೀದಿ. ಕರಾವಳಿ ಕಾವಲು ಪಡೆಯ ಡಾರ್ನಿಯರ್ ವಿಮಾನಗಳಿಗೆ ಹೈಟೆಕ್ ಎಲೆಕ್ಟ್ರೋ ಆಪ್ಟಿಕಲ್ ಮತ್ತು ಇನ್ಫ್ರಾರೆಡ್ ಸಿಸ್ಟಮ್ ಅಳವಡಿಕೆ. ಭೂಸೇನೆಗಾಗಿ ವಿಭವ್ ಆ್ಯಂಟಿ ಟ್ಯಾಂಕ್ ಮೈನ್‌ಗಳು ಹಾಗೂ ಟಿ-72 ಟ್ಯಾಂಕ್‌ಗಳ ನವೀಕರಣ.

‘ಆಪರೇಷನ್ ಸಿಂದೂರ್’ ವೇಳೆ ಶತ್ರು ರಾಷ್ಟ್ರಗಳ ಡ್ರೋನ್ ಮತ್ತು ಕ್ಷಿಪಣಿಗಳನ್ನು ಯಶಸ್ವಿಯಾಗಿ ತಡೆದಿದ್ದ ಎಸ್-400 ಟ್ರಯಂಫ್, ವಿಶ್ವದ ಅತ್ಯಂತ ಶಕ್ತಿಶಾಲಿ ಏರ್ ಡಿಫೆನ್ಸ್ ಸಿಸ್ಟಂಗಳಲ್ಲಿ ಒಂದಾಗಿದೆ. ಇದು 40 ಕಿ.ಮೀ ನಿಂದ 400 ಕಿ.ಮೀ ದೂರದವರೆಗಿನ ಯಾವುದೇ ವೈರಿ ಗುರಿಯನ್ನು ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !