ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣ, ವಿಧಾನಸಭಾ ಅಧಿವೇಶನ, ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ, ವಿದೇಶಿ ಪ್ರವಾಸ, ವರ್ಗಾವಣೆ, ಲವ್ ಜಿಹಾದ್ ಹಾಗೂ ಎಸ್‌ಐಆರ್ ಜಾರಿ ವಿಚಾರಗಳ ಕುರಿತು ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತೀವ್ರ ಟೀಕೆಗಳನ್ನು ಮಾಡಿದ್ದಾರೆ.
ಕುಂದಾಪುರದ ಕೋಟೇಶ್ವರದಲ್ಲಿ ಮಾತನಾಡಿದ ಅವರು, ಈ ಬಾರಿ ಅಧಿವೇಶನದಲ್ಲಿ ಜನರ ತೆರಿಗೆ ಹಣವನ್ನು ಹಾಳು ಮಾಡುವ ಕೆಲಸವಾಯಿತು. ಕೇಂದ್ರ ಸರ್ಕಾರ ಮತ್ತು ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವುದಕ್ಕಾಗಿಯೇ ಅಧಿವೇಶನವನ್ನು ಬಳಸಿಕೊಳ್ಳಲಾಯಿತು. ಗಂಭೀರ ವಿಚಾರಗಳಾದ ಅಬಕಾರಿ ಇಲಾಖೆಯ ಭ್ರಷ್ಟಾಚಾರ, ಜಿ ರಾಮ್ ಜಿ ಕುರಿತು ಸರಿಯಾದ ಚರ್ಚೆಯೇ ನಡೆಯಲಿಲ್ಲ. ಇದೊಂದು ಅರ್ಥಹೀನ ಅಧಿವೇಶನವಾಗಿದೆ ಎಂದು ಆರೋಪಿಸಿದರು.
ಕೇಂದ್ರ–ರಾಜ್ಯ ಸಂಬಂಧಗಳ ಬಗ್ಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಪ್ರತಿನಿಧಿಯಾದ ರಾಜ್ಯಪಾಲರಿಂದಲೇ ಕೇಂದ್ರವನ್ನೇ ಟೀಕೆ ಮಾಡಿಸುವುದು ಎಷ್ಟು ಸರಿ? ಇದರಿಂದ ರಾಜ್ಯ–ಕೇಂದ್ರದ ಸಂಬಂಧ ಹಾಳಾಗುತ್ತದೆ. ಶಾಸಕರ ಸಂಬಳ–ಭತ್ಯೆಗಾಗಿ ಮಾತ್ರ ಅಧಿವೇಶನ ನಡೆದಂತಾಗಿದೆ ಎಂದು ಕಿಡಿಕಾರಿದರು.
ರಾಜ್ಯ ರಾಜಕಾರಣಕ್ಕೆ ಅನಂತ್ ಕುಮಾರ್ ಹೆಗಡೆ ಮರಳುವ ವಿಚಾರಕ್ಕೆ ಸಂಬಂಧಿಸಿದಂತೆ, ಅವರು ವೈಯಕ್ತಿಕವಾಗಿ ಎಲ್ಲೂ ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ‘ದೆಹಲಿಗೆ ಬುಲಾವ್’ ಎನ್ನಲಾಗುತ್ತಿದೆ. ಯಾವುದೇ ದೃಢ ಮಾಹಿತಿ ಇಲ್ಲ. ರಾಜ್ಯ ರಾಜಕಾರಣಕ್ಕೆ ಬರಲು ಅವರಿಗೆ ಮನಸ್ಸಿದೆಯೋ ಇಲ್ಲವೋ ಅವರು ತಾವೇ ಬಹಿರಂಗಪಡಿಸಬೇಕು. ಬಿಜೆಪಿಯಲ್ಲಿ ಒಳ್ಳೆಯ ನಾಯಕತ್ವವನ್ನು ಮುಗಿಸುವ ಕೆಲಸವಾಗುತ್ತಿದೆ ಎಂದು ಹೇಳಿದರು
ಡಿಕೆ ಶಿವಕುಮಾರ್ ಕುರಿತು ಮಾತನಾಡಿದ ಯತ್ನಾಳ್, ವಿಧಾನಸಭೆಯಲ್ಲಿ ನೇರವಾಗಿ ಬೆದರಿಕೆ ಹಾಕುವ ರಾಜಕೀಯ ನಡೆಯುತ್ತಿದೆ. ‘ವಿಜೇಂದ್ರ ನಿನ್ನ ಫೈಲ್ ತೆಗಿಲಾ’ ಎಂಬಂತೆ ಮಾತನಾಡಲಾಗುತ್ತಿದೆ. ಬಿಜೆಪಿಯ ನೈತಿಕ ಶಕ್ತಿ ವಿಧಾನಸಭೆಯಲ್ಲಿ ಕುಗ್ಗಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು, ಅತಿ ಹೆಚ್ಚು ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಇದ್ದರೂ, ಅತಿ ಭ್ರಷ್ಟ ಮುಖ್ಯಮಂತ್ರಿ ಎಂಬ ಹೆಸರಿನಿಂದ ನಿವೃತ್ತರಾಗಬಾರದು. ಇದು ಸಿದ್ದರಾಮಯ್ಯನವರ ಕೊನೆ ಬಜೆಟ್ ಎಂದು ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ದುರ್ಬಲವಾಗಿದೆ ಎಂದರು.
ವಿದೇಶಿ ಪ್ರವಾಸ ಮತ್ತು ಸರ್ಕಾರ ಪತನ ಭೀತಿ :
ಕಾಂಗ್ರೆಸ್ ಶಾಸಕರ ವಿದೇಶಿ ಪ್ರವಾಸದ ಕುರಿತು, ಇದು ಅಧ್ಯಯನ ಪ್ರವಾಸವಲ್ಲ, ಶಕ್ತಿಪ್ರದರ್ಶನ. ಸರ್ಕಾರ ಪತನದ ಹಂತಕ್ಕೆ ಬಂದಿದೆ. ಡಿಕೆ ಶಿವಕುಮಾರ್ ಯಾವುದೇ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ. ಸರ್ಕಾರ ಬಿದ್ದರೂ ಆಶ್ಚರ್ಯವಿಲ್ಲ ಎಂದು ಹೇಳಿದರು.
ಕರಾವಳಿಯಲ್ಲಿ ಲವ್ ಜಿಹಾದ್ ಕುರಿತು, ಈ ಭಾಗದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಮೊದಲು ಹಿಂದುಗಳು ಜಾಗೃತರಾಗಬೇಕು. ಇದು ಜಾಗತಿಕ ಜಾಲ. ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಅಪಾಯ ಖಂಡಿತ. ಕಾಂಗ್ರೆಸ್ ಸರ್ಕಾರದಿಂದ ಇದಕ್ಕೆ ಪರಿಹಾರ ಸಿಗದು ಎಂದು ಹೇಳಿದರು.
ಎಸ್‌ಐಆರ್ ಕಡ್ಡಾಯ ಜಾರಿ ಕುರಿತು ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಎಸ್‌ಐಆರ್‌ಗೆ ಅಡ್ಡಿ ಪಡಿಸಬಾರದು ಎಂದು ಹೇಳಿದೆ. ಐತಿಹಾಸಿಕ ತೀರ್ಪು ಇದು. ದೇಶದಲ್ಲಿ ಅಕ್ರಮ ವಲಸೆಯ ಸಮಸ್ಯೆ ಗಂಭೀರವಾಗಿದೆ. ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಬೇಕು. ಎಸ್‌ಐಆರ್ ಜಾರಿಯಾಗುವುದು ಅವಶ್ಯಕ” ಎಂದು ಒತ್ತಾಯಿಸಿದರು.
ಒಟ್ಟಿನಲ್ಲಿ, ರಾಜ್ಯ ರಾಜಕಾರಣದಲ್ಲಿ ಅಸ್ಥಿರತೆ ಹೆಚ್ಚುತ್ತಿದೆ ಎಂದು ಎಚ್ಚರಿಕೆ ನೀಡಿದ ಶಾಸಕ ಯತ್ನಾಳ್, ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿದರು.



