ಹೊಸದಿಗಂತ ಚಿತ್ರದುರ್ಗ:
ದೇಶದಲ್ಲಿ ಜಾರಿಯಲ್ಲಿರುವ 600ಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳಿಗೆ ‘ನಕಲಿ ಗಾಂಧಿ’ಗಳ ಹೆಸರಿಡಲಾಗಿದೆ. ಕೂಡಲೇ ಆ ಹೆಸರುಗಳನ್ನು ತೆಗೆದು ಎಲ್ಲದಕ್ಕೂ ನೈಜ ದೇಶಭಕ್ತ ಮಹಾತ್ಮ ಗಾಂಧೀಜಿಯವರ ಹೆಸರನ್ನೇ ಇಡಲಿ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ವಾಗ್ದಾಳಿ ನಡೆಸಿದರು.
ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ‘ವಿಬಿ ಜಿ ರಾಮ್ ಜಿ’ ಯೋಜನೆ ಕುರಿತ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ನರೇಗಾ ಯೋಜನೆಯಲ್ಲಿ ತಂದಿರುವ ಸುಧಾರಣೆಗಳ ಬಗ್ಗೆ ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದೆ. ಹಿಂದೆ ಉದ್ಯೋಗ ಖಾತ್ರಿ ಹೆಸರಿನಲ್ಲಿ ಶೇ. 90ರಷ್ಟು ಕೇಂದ್ರದ ಅನುದಾನವನ್ನು ಲೂಟಿ ಮಾಡಲಾಗುತ್ತಿತ್ತು. ಈಗ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಭ್ರಷ್ಟರ ಹೊಟ್ಟೆಗೆ ಹೊಡೆದಿದೆ. ಹಣ ದುರ್ಬಳಕೆ ತಡೆಗಟ್ಟಲು ತಂತ್ರಜ್ಞಾನ ಮತ್ತು ಪಾರದರ್ಶಕತೆ ತಂದಿರುವುದನ್ನು ಕಾಂಗ್ರೆಸ್‌ನವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ,” ಎಂದು ಕುಟುಕಿದರು.
ಯೋಜನೆಯ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾ, ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದ ನಡುವಿನ ವ್ಯತ್ಯಾಸವನ್ನು ಅವರು ಹೀಗೆ ವಿವರಿಸಿದರು:
ಯುಪಿಎ ಅವಧಿ (2004-2014): ಮನಮೋಹನ್ ಸಿಂಗ್ ಸರ್ಕಾರ 10 ವರ್ಷಗಳಲ್ಲಿ ನೀಡಿದ್ದು ಕೇವಲ 2 ಲಕ್ಷ ಕೋಟಿ ರೂ. ಅನುದಾನ.
ಎನ್‌ಡಿಎ ಅವಧಿ (ಕಳೆದ 10 ವರ್ಷ): ನರೇಂದ್ರ ಮೋದಿ ಸರ್ಕಾರ ನೀಡಿದ್ದು ಬರೋಬ್ಬರಿ 8.5 ಲಕ್ಷ ಕೋಟಿ ರೂ. ಅನುದಾನ.
ಕೆಲಸದ ದಿನಗಳನ್ನು 100ರಿಂದ 125ಕ್ಕೆ ಏರಿಸಲಾಗಿದ್ದು, ಒಂದು ವಾರದೊಳಗೆ ಕೂಲಿ ಹಣ ಖಾತೆಗೆ ಜಮೆಯಾಗುವಂತೆ ಕಾನೂನು ಬಿಗಿಗೊಳಿಸಲಾಗಿದೆ.
“ಚಿತ್ರದುರ್ಗ ಜಿಲ್ಲೆಯೊಂದಕ್ಕೇ 1200 ಕೋಟಿ ರೂ. ಅನುದಾನ ಬಂದಿದೆ. ಆದರೆ, ಜಿಲ್ಲೆಯ 472 ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲದಿದ್ದರೂ ಬಿಲ್ ಪಡೆಯಲಾಗಿದೆ. ಈ ಹಿಂದೆ ಗ್ರಾಮ ಸಭೆಗಳನ್ನೇ ನಡೆಸದೆ, ಜೆಸಿಬಿ ಬಳಸಿ ಕೆಲಸ ಮಾಡಿ ಹಣ ಲೂಟಿ ಮಾಡಲಾಗುತ್ತಿತ್ತು. ಈಗ ಪ್ರತಿಯೊಂದು ಕಾಮಗಾರಿಯ ಹಂತ ಹಂತದ ಮಾಹಿತಿ ನೀಡಬೇಕು ಮತ್ತು ಶಾಶ್ವತ ಆಸ್ತಿ ನಿರ್ಮಾಣವಾಗಬೇಕು ಎಂಬ ನಿಯಮ ಜಾರಿಯಾಗಿದೆ,” ಎಂದು ತಿಳಿಸಿದರು.
ಕಾಂಗ್ರೆಸ್ ನಡೆಸುತ್ತಿರುವ ‘ಸುಳ್ಳಿನ ಪಾದಯಾತ್ರೆ’ಗೆ ಉತ್ತರವಾಗಿ ಬಿಜೆಪಿ ಕಾರ್ಯಕರ್ತರು ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಸಿ, ಜನರಿಗೆ ವಾಸ್ತವದ ಅರಿವು ಮೂಡಿಸಬೇಕು. ಸುಳ್ಳು ಹೇಳುವುದು ನೆಹರೂ ಕಾಲದಿಂದಲೂ ಕಾಂಗ್ರೆಸ್‌ಗೆ ಬಂದಿರುವ ಬಳುವಳಿ ಎಂದು ನವೀನ್ ಟೀಕಿಸಿದರು.



