ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಯಿ ಬೈದರೆಂಬ ಸಣ್ಣ ಕಾರಣಕ್ಕೆ ಮನನೊಂದ ಏಳನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ದಾರುಣ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಬಸರೀಕಟ್ಟೆ ಗ್ರಾಮದಲ್ಲಿ ಸಂಭವಿಸಿದೆ.
ಮೃತ ಬಾಲಕಿಯನ್ನು 13 ವರ್ಷದ ಸುಪ್ರಿತಾ ಎಂದು ಗುರುತಿಸಲಾಗಿದೆ. ಭಾನುವಾರ ಮಧ್ಯಾಹ್ನ ಕೆಲಸದಿಂದ ಮನೆಗೆ ಬಂದಿದ್ದ ತಾಯಿ ಸರೋಜಾ, ಮಗಳು ಟಿವಿ ನೋಡುತ್ತಾ ಅನ್ನ ಚೆಲ್ಲಿದ್ದಕ್ಕೆ ಬುದ್ಧಿ ಮಾತು ಹೇಳಿದ್ದರು. “ಓದದೆ ಬರೀ ಟಿವಿ ನೋಡುತ್ತೀಯಾ, ಚೆಲ್ಲಿರುವ ಅನ್ನವನ್ನು ಮೊದಲು ಸ್ವಚ್ಛಗೊಳಿಸು” ಎಂದು ಗದರಿಸಿ ಮತ್ತೆ ಕೆಲಸಕ್ಕೆ ತೆರಳಿದ್ದರು. ತಾಯಿಯ ಈ ಮಾತಿನಿಂದ ತೀವ್ರವಾಗಿ ಮನನೊಂದ ಸುಪ್ರಿತಾ, ಮನೆಯ ಮೇಲ್ಛಾವಣಿಗೆ ತನ್ನ ವೇಲ್‌ನಿಂದ ನೇಣು ಬಿಗಿದುಕೊಂಡಿದ್ದಾಳೆ.
ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಸುಪ್ರಿತಾ ಕೊನೆಯುಸಿರೆಳೆದಿದ್ದಾಳೆ. ತಾಯಿ ಸರೋಜಾ ತನ್ನ ಗಂಡನಿಂದ ಬೇರ್ಪಟ್ಟು ಹಿರಿಯ ಮಗಳಾದ ಸುಪ್ರಿತಾಳೊಂದಿಗೆ ವಾಸವಿದ್ದರು. ಈ ಕುರಿತು ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



