October 8, 2026
Thursday, October 8, 2026
spot_img

ಅಜ್ಜಿ ಚೆನ್ನಮ್ಮ ನಿಧನ: ಅಂತಿಮ ದರ್ಶನಕ್ಕಾಗಿ ತುರ್ತು ಪೆರೋಲ್ ಕೋರಿ ಪ್ರಜ್ವಲ್ ರೇವಣ್ಣ ಅರ್ಜಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಧರ್ಮಪತ್ನಿ ಚೆನ್ನಮ್ಮ ಅಗಲಿಕೆಯಿಂದ ಇಡೀ ದೊಡ್ಡಗೌಡರ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ. ಈ ನಡುವೆ, ಜೈಲಿನಲ್ಲಿರುವ ಅವರ ಮೊಮ್ಮಗ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತುರ್ತು ಪೆರೋಲ್ ಕೋರಿ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ.

 ತುರ್ತು ಪೆರೋಲ್‌ಗಾಗಿ ಜೈಲು ನಿಯಮಾವಳಿ ಮೊರೆ

ಅತ್ಯಾಚಾರ ಪ್ರಕರಣದಲ್ಲಿ ಜೀವಿತಾವಧಿ ಶಿಕ್ಷೆಗೆ ಗುರಿಯಾಗಿ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಗೃಹದಲ್ಲಿರುವ ಪ್ರಜ್ವಲ್ ರೇವಣ್ಣ, ತಮ್ಮ ವಕೀಲರ ಮೂಲಕ ಜೈಲು ಮುಖ್ಯ ಅಧೀಕ್ಷಕರಿಗೆ ತುರ್ತು ಪೆರೋಲ್ ಅರ್ಜಿ ತಲುಪಿಸಿದ್ದಾರೆ. ರಕ್ತಸಂಬಂಧಿಕರು ಅಥವಾ ಕುಟುಂಬದ ಹಿರಿಯರು ನಿಧನರಾದಾಗ ಕೈದಿಗಳಿಗೆ ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಲು ಕಾನೂನಿನಲ್ಲಿ ವಿಶೇಷ ಪೆರೋಲ್ ಪಡೆಯಲು ಅವಕಾಶವಿರುತ್ತದೆ.

ಜೈಲಾಧಿಕಾರಿಗಳ ಅಂತಿಮ ನಿರ್ಧಾರ ಬಾಕಿ

ಪ್ರಜ್ವಲ್ ಸಲ್ಲಿಸಿರುವ ಅರ್ಜಿಯನ್ನು ಜೈಲಾಧಿಕಾರಿಗಳು ಕಾನೂನು ತಜ್ಞರೊಂದಿಗೆ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಪರಿಶೀಲಿಸುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಹೈಪ್ರೊಫೈಲ್ ಕೈದಿಯಾಗಿರುವುದರಿಂದ, ಅವರಿಗೆ ಪೆರೋಲ್ ನೀಡಿದರೆ ಒದಗಿಸಬೇಕಾದ ಪೊಲೀಸ್ ಭದ್ರತೆ ಮತ್ತು ನಿಯಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧೀಕ್ಷಕರು ಈ ಅರ್ಜಿಯ ಮೇಲಿನ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ.

ಇದನ್ನೂ ಓದಿ:

ಆರಿತು ಗೌಡರ ಮನೆಯ ಮೌನದ ದೀಪ!

ದೇವೇಗೌಡರ ಸುದೀರ್ಘ ರಾಜಕೀಯ ಏಳುಬೀಳುಗಳಲ್ಲಿ ಸದಾ ಮೌನವಾಗಿ ಬೆಂಬಲಕ್ಕೆ ನಿಂತಿದ್ದ ಚೆನ್ನಮ್ಮ ನಿಧನ ಕುಟುಂಬಕ್ಕೆ ಭರಿಸಲಾಗದ ನಷ್ಟ ತಂದಿದೆ. ಜೈಲಿನಲ್ಲಿರುವ ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಜೈಲಾಧಿಕಾರಿಗಳು ಗ್ರೀನ್ ಸಿಗ್ನಲ್ ನೀಡುತ್ತಾರಾ ಅಥವಾ ಅರ್ಜಿ ತಿರಸ್ಕೃತವಾಗುತ್ತಾ ಎಂಬುದು ಕೆಲವೇ ಗಂಟೆಗಳಲ್ಲಿ ನಿರ್ಧಾರವಾಗಲಿದೆ.

Must Read