ನಾವು ಯಾರಾದರೂ ಒಬ್ಬರ ಮೇಲೆ ಪ್ರೀತಿ ಇಟ್ಟಾಗ, ಸಂಬಂಧಕ್ಕೆ ಸಮಯ ಕೊಟ್ಟಾಗ ಅಥವಾ ನಮ್ಮ ಕನಸುಗಳಿಗೆ ಶ್ರಮ ಹಾಕಿದಾಗ, ಸಹಜವಾಗಿಯೇ ಕೆಲವು ನಿರೀಕ್ಷೆಗಳು ಹುಟ್ಟುತ್ತವೆ. ಅದು ತಪ್ಪಲ್ಲ. ಆದರೆ ಆ ನಿರೀಕ್ಷೆಗಳು ಮಿತಿಯನ್ನು ಮೀರಿ ನಮ್ಮ ಮನಸ್ಸಿನ ಮೇಲೆ ಒತ್ತಡವಾಗಿಬಿಟ್ಟಾಗ, ಅಲ್ಲಿ ಸಮಸ್ಯೆ ಶುರುವಾಗುತ್ತದೆ. ನಿರೀಕ್ಷೆ ಇರೋದು ಸಹಜ, ಆದರೆ ಅತಿಯಾದ ನಿರೀಕ್ಷೆ ನಮ್ಮ ಶಾಂತಿಯನ್ನು ಕದಿಯುತ್ತೆ ಅನ್ನೋದು ನೆನಪಿರಲಿ.
ಹೆಚ್ಚಾಗಿ ನಾವು ನೋವು ಅನುಭವಿಸುವುದು ವಾಸ್ತವಿಕತೆ ಕಾರಣಕ್ಕಿಂತ, ನಮ್ಮ ಕಲ್ಪನೆಗಳ ಕಾರಣದಿಂದ. “ಅವನು ಹೀಗೆ ಮಾಡಬೇಕು”, “ಅವಳು ಹೀಗೆ ಅರ್ಥಮಾಡಿಕೊಳ್ಳಬೇಕು”, “ನನ್ನ ಪ್ರಯತ್ನಕ್ಕೆ ಇದೇ ಫಲ ಬರಬೇಕು” ಈ ರೀತಿಯ ಮಾತುಗಳು ನಮ್ಮ ಮನಸ್ಸಿನಲ್ಲಿ ದೊಡ್ಡ ಚಿತ್ರವನ್ನೇ ಬಿಡಿಸುತ್ತವೆ. ಆದರೆ ಜೀವನ ಯಾವಾಗಲೂ ನಮ್ಮ ಸ್ಕ್ರಿಪ್ಟ್ ಪ್ರಕಾರ ನಡೆಯುವುದಿಲ್ಲ. ಆಗ ನಾವು ನಿರಾಶರಾಗುತ್ತೇವೆ.
ಇದನ್ನೂ ಓದಿ:
ನಿರೀಕ್ಷೆ ಹೆಚ್ಚಾದಷ್ಟು ನಿರಾಸೆಯ ತೀವ್ರತೆಯೂ ಹೆಚ್ಚುತ್ತದೆ. ಇದು ಸಂಬಂಧಗಳಲ್ಲಿ ಕೂಡ ಕಾಣಬಹುದು. ನಾವು ನಮ್ಮ ರೀತಿಯಲ್ಲಿ ಕಾಳಜಿ ತೋರಿಸಿದರೆ, ಎದುರಾಳಿಯೂ ಅದೇ ರೀತಿಯಲ್ಲಿ ಪ್ರತಿಕ್ರಿಯಿಸಬೇಕು ಎಂದು ಭಾವಿಸುತ್ತೇವೆ. ಆದರೆ ಪ್ರತಿಯೊಬ್ಬರ ಅಭಿವ್ಯಕ್ತಿ ವಿಭಿನ್ನ. ನಮ್ಮ ಮಾನದಂಡವನ್ನು ಎಲ್ಲರ ಮೇಲೂ ಹೇರಿದಾಗ, ಅಲ್ಲಿ ಅಸಮಾಧಾನ ಹುಟ್ಟುತ್ತದೆ. ಅದೇ ರೀತಿ, ನಮ್ಮ ಜೀವನ ಗುರಿಗಳಲ್ಲೂ ಅತಿಯಾದ ನಿರೀಕ್ಷೆ ಕಾಡುತ್ತದೆ. ಒಂದು ಪ್ರಯತ್ನ ಮಾಡಿದ ತಕ್ಷಣವೇ ಫಲ ಸಿಗಬೇಕು ಅನ್ನೋ ಆತುರ, ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ ಇತರರ “ಸಕ್ಸೆಸ್” ಜೊತೆ ನಮ್ಮನ್ನು ಹೋಲಿಸಿಕೊಳ್ಳುವ ಅಭ್ಯಾಸ ಇವು ಮನಸ್ಸಿಗೆ ಒತ್ತಡ ತರಬಹುದು. ನಾವು ನಮ್ಮ ಪ್ರಯಾಣದ ಗತಿಯನ್ನು ಮರೆತುಬಿಡುತ್ತೇವೆ.
ಅದರರ್ಥ ನಿರೀಕ್ಷೆ ಇಡಬಾರದೆಂದಲ್ಲ. ಆದರೆ ನಿರೀಕ್ಷೆಗಿಂತ ಸ್ವೀಕಾರದ ಮನೋಭಾವ ದೊಡ್ಡದು. ಎಲ್ಲವೂ ನಮ್ಮಂತೆ ನಡೆಯಲೇಬೇಕು ಅನ್ನೋ ಹಠ ಬಿಟ್ಟಾಗ, ಮನಸ್ಸು ಹಗುರವಾಗುತ್ತದೆ. ನಾವು ಕೊಡುವ ಪ್ರೀತಿ, ಶ್ರಮ, ಸಮಯ ಅವು ನಮ್ಮ ಮೌಲ್ಯವನ್ನು ತೋರಿಸುವವು. ಫಲ ಯಾವಾಗ, ಹೇಗೆ ಬರುತ್ತದೆ ಅನ್ನೋದನ್ನು ಜೀವನವೇ ನಿರ್ಧರಿಸುತ್ತದೆ.



