ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಒಂದು ಕೆಜಿ ಅಕ್ಕಿ ಸಾಮಾನ್ಯವಾಗಿ 100 ರೂಪಾಯಿ ಒಳಗೇ ಸಿಗುತ್ತೆ. ಆದರೆ ಸಾವಿರಾರು ರೂಪಾಯಿ ಕೊಟ್ಟು ಅಕ್ಕಿ ಖರೀದಿಸುವುದು ಅಸಾಧ್ಯವೆನಿಸಬಹುದು. ಇದೀಗ ವಿಶ್ವದ ಅತ್ಯಂತ ದುಬಾರಿ ಅಕ್ಕಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಿನ್ಮೆಮೈ’ ಅಕ್ಕಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಈ ಅಕ್ಕಿ ತನ್ನ ಪ್ರೀಮಿಯಂ ಗುಣಮಟ್ಟ ಮತ್ತು ವಿಶಿಷ್ಟ ಉತ್ಪಾದನಾ ವಿಧಾನಗಳಿಂದಲೇ ಜನಪ್ರಿಯವಾಗಿದೆ. ಸಾಮಾನ್ಯ ಅಕ್ಕಿಗಿಂತ ರುಚಿಯಲ್ಲಿ ವಿಭಿನ್ನವಾಗಿದ್ದು, ಆರೋಗ್ಯಕರ ಅಂಶಗಳನ್ನು ಹೆಚ್ಚು ಹೊಂದಿದೆ ಎಂದು ಹೇಳಲಾಗುತ್ತದೆ. ಇನ್ನೊಂದು ವಿಶೇಷವೆಂದರೆ, ಇದನ್ನು ಬೇಯಿಸುವ ಮೊದಲು ತೊಳೆಯುವ ಅಗತ್ಯವಿಲ್ಲ. ಇದರಿಂದ ಸಮಯ ಉಳಿಯುವುದಷ್ಟೇ ಅಲ್ಲ, ನೀರಿನ ಸಂರಕ್ಷಣೆಯೂ ಸಾಧ್ಯವಾಗುತ್ತದೆ.
ಕಿನ್ಮೆಮೈ ಅಕ್ಕಿ ಬಿಳಿ ಮತ್ತು ಕಂದು ಬಣ್ಣದ ಎರಡು ವಿಧಗಳಲ್ಲಿ ಲಭ್ಯವಿದೆ. ಕಡಿಮೆ ಸಮಯದಲ್ಲಿ ಬೇಯುವ ಈ ಅಕ್ಕಿ ಸುಲಭವಾಗಿ ಜೀರ್ಣವಾಗುತ್ತದೆ ಎಂದು ಹೇಳಲಾಗುತ್ತದೆ. ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ ಎಂಬ ಅಭಿಪ್ರಾಯವೂ ಇದೆ.
ಇದನ್ನೂ ಓದಿ:
ಸಾಮಾನ್ಯ ವೈಟ್ ರೈಸ್‌ಗಿಂತ ಇದರಲ್ಲಿ ಹೆಚ್ಚು ಫೈಬರ್ ಮತ್ತು ವಿಟಮಿನ್‌ಗಳು ಇರುವುದರಿಂದ ಆರೋಗ್ಯದ ದೃಷ್ಟಿಯಿಂದ ಉತ್ತಮವೆಂದು ಪರಿಗಣಿಸಲಾಗುತ್ತದೆ. ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗುವ ಪೋಷಕಾಂಶಗಳೂ ಇದರಲ್ಲಿ ಕಂಡುಬರುತ್ತವೆ.
ಬೆಲೆಯ ವಿಷಯಕ್ಕೆ ಬಂದರೆ, ಈ ಅಕ್ಕಿ ಪ್ರತಿ ಕೆಜಿಗೆ ಸುಮಾರು 15,000 ರೂಪಾಯಿವರೆಗೆ ಮಾರಾಟವಾಗುತ್ತದೆ. ಸಾಮಾನ್ಯವಾಗಿ ಚಿಕ್ಕ ಪ್ಯಾಕೆಟ್‌ಗಳಲ್ಲಿ ಪ್ಯಾಕ್ ಮಾಡಲಾಗುತ್ತದೆ. ಇದನ್ನು ಜಪಾನ್‌ನ ವಿಶೇಷ ಪ್ರದೇಶಗಳಲ್ಲಿ (ಗುನ್ಮಾ, ಗಿಫು, ಕುಮಾಮೊಟೊ, ನಾಗಾನೊ ಮತ್ತು ನಿಗಾಟಾ) ಬೆಳೆಯಲಾಗುತ್ತದೆ. ಇದು ಐದು ವಿವಿಧ ಭತ್ತದ ತಳಿಗಳ ಮಿಶ್ರಣವಾಗಿದೆ ಎನ್ನಲಾಗಿದೆ. ಅದರ ವಿಶಿಷ್ಟತೆ ಮತ್ತು ಗುಣಮಟ್ಟವೇ ಇದನ್ನು ವಿಶ್ವದ ಅತ್ಯಂತ ದುಬಾರಿ ಅಕ್ಕಿಯಾಗಿ ಗುರುತಿಸಿಕೊಳ್ಳುವಂತೆ ಮಾಡಿದೆ.



