February 16, 2026
Monday, February 16, 2026
spot_img

ಬೈಕ್-ಸ್ಕೂಟಿ ನಡುವೆ ಭೀಕರ ಅಪಘಾತ: ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚನ್ನರಾಯಪಟ್ಟಣ ತಾಲ್ಲೂಕಿನ ದೊಡ್ಡರಿ ಕಾವಲು ಗೇಟ್ ಬಳಿ ಇಂದು ಸಂಭವಿಸಿದ ಬೈಕ್ ಹಾಗೂ ಸ್ಕೂಟಿ ನಡುವಿನ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಯುವಕರು ದುರ್ಮರಣಕ್ಕೀಡಾಗಿದ್ದಾರೆ.

ಮತ್ತಿಘಟ್ಟ ಗ್ರಾಮದ ರಮೇಶ್ (23) ಹಾಗೂ ಕಿರಣ್ (22) ಎಂಬುವವರು ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಎಂ. ಹೊನ್ನೇನಹಳ್ಳಿ ಗ್ರಾಮದ ಪುರುಷೋತ್ತಮ್ (26) ಅವರ ಬೈಕ್, ಸ್ಕೂಟಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ರಮೇಶ್ ಹಾಗೂ ಪುರುಷೋತ್ತಮ್ ಇಬ್ಬರೂ ಮೃತಪಟ್ಟಿದ್ದಾರೆ.

ಮೃತ ರಮೇಶ್ ಬಾಲ್ಯದಲ್ಲೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸಿ ಸ್ಕೂಟಿ ಚಲಾಯಿಸುತ್ತಿದ್ದರೂ, ಅಪಘಾತದ ರಭಸಕ್ಕೆ ಎದುರು ಬಂದ ಬೈಕ್‌ನ ಹ್ಯಾಂಡಲ್ ನೇರವಾಗಿ ಅವರ ಎದೆಗೆ ಬಲವಾಗಿ ಚುಚ್ಚಿದ್ದರಿಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತೊಬ್ಬ ಯುವಕ ಕಿರಣ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !