September 29, 2026
Tuesday, September 29, 2026
spot_img

ಬರಲಾರೆ ಎನ್ನಲಾರೆ, ಬರುವ ದಿನ ಹೇಳಲಾರೆ: ಬಾಂಬೆ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾದ್ರಾ ಮಲ್ಯ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ಯಾಂಕ್‌ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಅವರಿಗೆ ಬಾಂಬೆ ಹೈಕೋರ್ಟ್ ಅಂತಿಮ ಎಚ್ಚರಿಕೆ ನೀಡಿದೆ. “ನೀವು ಕಾನೂನಿನ ಸೌಲಭ್ಯ ಪಡೆಯಬೇಕೆಂದರೆ ಮೊದಲು ಭಾರತಕ್ಕೆ ಮರಳಿ, ನ್ಯಾಯಾಲಯಕ್ಕೆ ಹಾಜರಾಗಿ” ಎಂದು ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ನೇತೃತ್ವದ ಪೀಠವು ಕಠಿಣ ಸಂದೇಶ ರವಾನಿಸಿದೆ.

ತಮ್ಮನ್ನು ‘ಪರಾರಿಯಾದ ಆರ್ಥಿಕ ಅಪರಾಧಿ’ ಎಂದು ಘೋಷಿಸಿರುವುದನ್ನು ಪ್ರಶ್ನಿಸಿ ಮಲ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಈ ಕೆಳಗಿನ ಅಂಶಗಳನ್ನು ಸ್ಪಷ್ಟಪಡಿಸಿದೆ:

ನ್ಯಾಯಾಲಯದ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುತ್ತಾ, ಅದೇ ನ್ಯಾಯಾಲಯದಿಂದ ಪರಿಹಾರ ಬಯಸುವುದು ಸಾಧ್ಯವಿಲ್ಲ.

ಪ್ರಕರಣವನ್ನು ತಕ್ಷಣವೇ ವಜಾಗೊಳಿಸದ ನ್ಯಾಯಾಲಯ, ಮಲ್ಯ ಅವರ ನಿಲುವನ್ನು ಸ್ಪಷ್ಟಪಡಿಸಲು ಕೊನೆಯ ಒಂದು ಅವಕಾಶ ನೀಡಿದೆ. ನೀವು ಭಾರತಕ್ಕೆ ಯಾವಾಗ ಮರಳುತ್ತೀರಿ ಎಂಬ ಬಗ್ಗೆ ಸ್ಪಷ್ಟವಾದ ಅಫಿಡವಿಟ್ ಸಲ್ಲಿಸುವಂತೆ ಆದೇಶಿಸಿದೆ.

ನ್ಯಾಯಾಲಯದ ಕಠಿಣ ನಿಲುವಿಗೆ ಪ್ರತಿಕ್ರಿಯಿಸಿರುವ 70 ವರ್ಷದ ವಿಜಯ್ ಮಲ್ಯ, ತಾನು ಸದ್ಯಕ್ಕೆ ಭಾರತಕ್ಕೆ ಮರಳುವ ಸ್ಥಿತಿಯಲ್ಲಿಲ್ಲ ಎಂದು ತಿಳಿಸಿದ್ದಾರೆ. ಬ್ರಿಟನ್ ನ್ಯಾಯಾಲಯಗಳಲ್ಲಿ ತಮ್ಮ ವಿರುದ್ಧ ಕಾನೂನು ಪ್ರಕ್ರಿಯೆಗಳು ನಡೆಯುತ್ತಿರುವುದರಿಂದ ಮತ್ತು ಅಲ್ಲಿನ ನ್ಯಾಯಾಲಯಗಳು ಕೆಲವು ನಿರ್ಬಂಧಗಳನ್ನು ವಿಧಿಸಿರುವುದರಿಂದ ತನಗೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ‘ವಿದೇಶಿ ನೆಪ’ವೊಡ್ಡಿದ್ದಾರೆ.

2016 ರಿಂದ ಇಂಗ್ಲೆಂಡ್‌ನಲ್ಲಿ ಆಶ್ರಯ ಪಡೆದಿರುವ ಮಲ್ಯ, ಭಾರತದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಹಣ ವರ್ಗಾವಣೆ ಮತ್ತು ವಂಚನೆ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಸದ್ಯ ಅವರು 2018ರ ಆರ್ಥಿಕ ಅಪರಾಧಿಗಳ ಕಾಯ್ದೆಯ ಸಿಂಧುತ್ವವನ್ನೇ ಪ್ರಶ್ನಿಸಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.

Must Read