ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ರಂಗದಲ್ಲಿ ನಟ-ನಟಿಯರ ನಡುವೆ ಸ್ನೇಹ ಬೆಳೆದರೆ ಸಾಕು, ಅದು ಪ್ರೀತಿ-ಮದುವೆಯವರೆಗೆ ಹೋಗಿ ನಿಲ್ಲುವುದು ಸಾಮಾನ್ಯ. ಕಳೆದ ಕೆಲವು ದಿನಗಳಿಂದ ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್‌ವರೆಗೆ ಸದ್ದು ಮಾಡುತ್ತಿದ್ದ ಸುದ್ದಿಯೆಂದರೆ ಅದು ಮೃಣಾಲ್ ಠಾಕೂರ್ ಮತ್ತು ಧನುಷ್ ಅವರ ಡೇಟಿಂಗ್ ವಿಚಾರ.
ಈ ವರ್ಷದ ಪ್ರೇಮಿಗಳ ದಿನದಂದು ಇವರಿಬ್ಬರು ಹಸೆಮಣೆ ಏರುತ್ತಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ ಫೆಬ್ರವರಿ 14 ಕಳೆದು ಹೋದರೂ ಅಂತಹದ್ದೇನೂ ಸಂಭವಿಸಲಿಲ್ಲ. ಈ ಮೂಲಕ ಗಾಸಿಪ್ ಹಬ್ಬಿಸುವವರ ಬಾಯಿಗೆ ಬೀಗ ಬಿದ್ದಿದೆ.
ಕಳೆದ ವರ್ಷ ಮೃಣಾಲ್ ಠಾಕೂರ್ ನಟನೆಯ ‘ಸನ್ ಆಫ್ ಸರ್ದಾರ್ 2’ ಚಿತ್ರದ ಪ್ರೀಮಿಯರ್ ಶೋ ನಡೆದಿತ್ತು. ಅಚ್ಚರಿಯೆಂದರೆ ಈ ಚಿತ್ರಕ್ಕೂ ನಟ ಧನುಷ್ ಅವರಿಗೂ ಯಾವುದೇ ವೃತ್ತಿಪರ ಸಂಬಂಧ ಇರಲಿಲ್ಲ. ಆದರೂ ಧನುಷ್ ಅವರು ಈ ಕಾರ್ಯಕ್ರಮದಲ್ಲಿ ಪ್ರತ್ಯಕ್ಷರಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ಚರ್ಚೆ ಆರಂಭವಾಗಲು ಇದೇ ಪ್ರಮುಖ ಕಾರಣವಾಗಿತ್ತು.
ಈ ಎಲ್ಲಾ ವದಂತಿಗಳಿಗೆ ಈಗ ಸ್ವತಃ ಮೃಣಾಲ್ ಅವರೇ ತೆರೆ ಎಳೆದಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ತಾವು ಧನುಷ್ ಅವರ ಅಪ್ಪಟ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ಧನುಷ್ ಅವರೊಂದಿಗೆ ತೆರೆ ಹಂಚಿಕೊಳ್ಳುವ ದೊಡ್ಡ ಆಸೆಯನ್ನೂ ಅವರು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಇಬ್ಬರ ನಡುವೆ ಇರುವುದು ಕೇವಲ ಗೌರವಯುತ ಸ್ನೇಹ ಮತ್ತು ಅಭಿಮಾನ ಮಾತ್ರ ಎಂಬುದು ಸಾಬೀತಾಗಿದೆ.



