ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಒಂದು ವರ್ಷ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಅಂದು ಟೈಪ್ ಎ ದುರಂತಕ್ಕೆ ಒಳಗಾಗಿದ್ದರು ಎಂದು ನಾಸಾ ಸ್ಪೋಟಕ ಮಾಹಿತಿ ನೀಡಿದೆ. ಟೈಪ್ ಎ ಲಿಸ್ಟಿಂಗ್ ಎನ್ನುವುದು ಇದು ತುಂಬಾ ಗಂಭೀರ ಅಪಘಾತ ಎಂದರ್ಥ.
ಈ ಕುರಿತು 311 ಪುಟಗಳ ವರದಿಯಲ್ಲಿ ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್‌ಮನ್ ಮಾಹಿತಿ ಬಹಿರಂಗಪಡಿಸಿದ್ದು, ಬೋಯಿಂಗ್ ಬಾಹ್ಯಾಕಾಶ ನೌಕೆಯಲ್ಲಿ ಹೋಗಿದ್ದ ಈ ಕಾರ್ಯಾಚರಣೆ ಸಂಪೂರ್ಣ ವಿಫಲವಾಗಿದೆ. ಇಲ್ಲಿ ಎಂಜಿನಿಯರಿಂಗ್ ಮತ್ತು ನಾಯಕತ್ವ ವೈಫಲ್ಯಗಳು ಇದ್ದವು ಎಂದು ಒಪ್ಪಿಕೊಂಡಿದೆ. ಇದು ಕೂಡ 2003 ರಲ್ಲಿ ಕೊಲಂಬಿಯಾ ನಡೆದ ಬಾಹ್ಯಾಕಾಶ ನೌಕೆಯ ದುರಂತದಂತೆಯೇ ಎಂದು ನಾಸಾ ಕರೆದಿದೆ.
2003 ರಲ್ಲಿ ಕೊಲಂಬಿಯಾ ಬಾಹ್ಯಾಕಾಶ ನೌಕೆಯ ದುರಂತದಲ್ಲಿ ಭಾರತೀಯ ಮೂಲದ ಕಲ್ಪನಾ ಚಾವ್ಲಾ ಸಾವು ಕಂಡಿದ್ದರು.
ಬೋಯಿಂಗ್ ಮತ್ತು ಏಜೆನ್ಸಿಯು ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಸಲುವಾಗಿ ನಿರ್ಣಾಯಕ ಅಲರ್ಟ್‌ಗಳನ್ನು ನಿರ್ಲಕ್ಷಿಸಿವೆ. ಜೂನ್ 2024 ರಲ್ಲಿ ಯೋಜನೆಯ ಉಡಾವಣೆಯ ಸಮಯದಲ್ಲಿ ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್ ವ್ಯವಸ್ಥೆಯಲ್ಲಿ ಸಮಸ್ಯೆ ಕಂಡುಬಂದಿತ್ತು. ಈ ಪ್ರೊಪಲ್ಷನ್ ವ್ಯವಸ್ಥೆಯು ರಾಕೆಟ್ ಉಡಾವಣೆಗೆ ಅಗತ್ಯವಾದ ಒತ್ತಡವನ್ನು ಒದಗಿಸಬೇಕಿತ್ತು ಎಂದು ವರದಿಯಲ್ಲಿ ತಿಳಿಸಿದೆ.
ಬಾಹ್ಯಾಕಾಶ ನಿಲ್ದಾಣಕ್ಕೆ ಸುನೀತಾ ಮತ್ತು ವಿಲ್ಮೋರ್ ಪ್ರವೇಶಿಸಿದಾಗ ಬಳಿಕವೇ ಥ್ರಸ್ಟರ್‌ಗಳು ನಿಷ್ಕ್ರಿಯವಾಗಿದ್ದು ಮತ್ತು ಹೀಲಿಯಂ ಸೋರಿಕೆಯಾಗುತ್ತಿರುವುದು ತಿಳಿದಿದ್ದು, ಆ ವೇಳೆ ತಾಂತ್ರಿಕ ಸಮಸ್ಯೆಗಳು ನಿರೀಕ್ಷೆಗಳನ್ನು ಮೀರಿದ್ದವು. ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಒತ್ತಡದ ನಡುವೆಯೂ ಸುರಕ್ಷತಾ ಮಾನದಂಡಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು ತಿಳಿದುಬಂದಿದೆ.
ಸುನೀತಾ ಮತ್ತು ವಿಲ್ಮೋರ್ ಮತ್ತೊಂದು ಬಾಹ್ಯಾಕಾಶ ನೌಕೆಯಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳಿದರೂ, ವರದಿಯು ಭಾರಿ ಆರ್ಥಿಕ ನಷ್ಟವನ್ನುಂಟುಮಾಡಿದೆ ಎಂದು ತೋರಿಸುತ್ತದೆ. ಸ್ಟಾರ್‌ಲೈನರ್ ಮಿಷನ್ $200 ಮಿಲಿಯನ್ ನಷ್ಟವನ್ನು ಅನುಭವಿಸಿದೆ ಎಂದು ಐಸಾಕ್‌ಮನ್ ಬಹಿರಂಗಪಡಿಸಿದ್ದಾರೆ. ಎರಡು ಮಾನವ ಜೀವಗಳನ್ನು ಅಪಾಯಕ್ಕೆ ಸಿಲುಕಿಸುವ ಸಂಪೂರ್ಣ ಜವಾಬ್ದಾರಿಯನ್ನು ನಾಸಾ ತೆಗೆದುಕೊಂಡಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ.
2003 ರಲ್ಲಿ, ಕಲ್ಪನಾ ಚಾವ್ಲಾ ಮತ್ತು ಆರು ಗಗನಯಾತ್ರಿಗಳನ್ನು ಹೊತ್ತ ಕೊಲಂಬಿಯಾ ಬಾಹ್ಯಾಕಾಶ ನೌಕೆ ಭೂಮಿಯ ವಾತಾವರಣಕ್ಕೆ ಪ್ರವೇಶಿಸುತ್ತಿದ್ದಂತೆ ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿತು. ಆಗಲೂ, ಬಾಹ್ಯಾಕಾಶ ವಿಜ್ಞಾನಿಗಳು ಬಾಹ್ಯಾಕಾಶ ನೌಕೆಯಲ್ಲಿ ಫೋಮ್ ಸೋರಿಕೆಯಾಗುತ್ತಿದೆ ಎಂದು ಎಚ್ಚರಿಸಿದ್ದರು, ಆದರೆ ಆಡಳಿತ ಮಂಡಳಿ ಅದನ್ನು ನಿರ್ಲಕ್ಷಿಸಿತು. ಫಲಿತಾಂಶ ಎನ್ನುವಂತೆ ನೌಕೆ ಆಗಸದಲ್ಲಿಯೇ ಉರಿದು ಬೂದಿಯಾಗಿತ್ತು. ಸ್ಟಾರ್‌ಲೈನರ್‌ನಲ್ಲೂ ಇದೇ ರೀತಿಯ ಪರಿಸ್ಥಿತಿ ಸಂಭವಿಸಿದೆ ಎಂದು ತಿಳಿದಿದ್ದರೂ ನಾಸಾ ಈ ಯೋಜನೆಯನ್ನು ಮುಂದುವರಿಸಿತ್ತು ಎಂದು ವರದಿ ಆರೋಪಿಸಿದೆ.



