ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಲಿವುಡ್‌ನ ಮಾಂತ್ರಿಕ ನಿರ್ದೇಶಕ ಲೋಕೇಶ್ ಕನಗರಾಜ್ ಮತ್ತು ನಟ ಕಾರ್ತಿ ಮತ್ತೆ ಕೈಜೋಡಿಸುತ್ತಿರುವ ಸುದ್ದಿ ಈಗ ಸಿನಿರಂಗದಲ್ಲಿ ಸಂಚಲನ ಮೂಡಿಸಿದೆ. 2019ರಲ್ಲಿ ತೆರೆಕಂಡು ಇತಿಹಾಸ ಸೃಷ್ಟಿಸಿದ್ದ ‘ಕೈದಿ’ ಚಿತ್ರದ ಮುಂದುವರಿದ ಭಾಗಕ್ಕಾಗಿ ಇಡೀ ಸೌತ್ ಇಂಡಿಯಾ ಕಾಯುತ್ತಿದೆ. ಆದರೆ ಈಗ ಸಿಕ್ಕಿರುವ ಲೇಟೆಸ್ಟ್ ಅಪ್‌ಡೇಟ್ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ‘ಕೈದಿ 2’ ಚಿತ್ರಕ್ಕೆ ಚಿತ್ರತಂಡ ‘ದಿಲ್ಲಿ’ ಎಂದು ಹೆಸರಿಟ್ಟಿದೆ ಎಂಬ ಚರ್ಚೆ ಶುರುವಾಗಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ, ‘ದಿಲ್ಲಿ’ ಎನ್ನುವ ಹೆಸರಿನ ಚಿತ್ರದ ಟೀಸರ್ ಇಂದು ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರ ಪಡೆದುಕೊಂಡಿದೆ. ‘ಕೈದಿ’ ಸಿನಿಮಾದಲ್ಲಿ ಕಾರ್ತಿ ಅವರ ಪಾತ್ರದ ಹೆಸರು ಕೂಡ ‘ದಿಲ್ಲಿ’ ಎಂದೇ ಆಗಿರುವುದು ಈ ಅನುಮಾನಕ್ಕೆ ಬಲ ನೀಡಿದೆ. ವಿಶೇಷವೆಂದರೆ, ಮೊದಲ ಭಾಗವನ್ನು ನಿರ್ಮಿಸಿದ್ದ ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಸಂಸ್ಥೆಯೇ ಈ ಹೊಸ ಶೀರ್ಷಿಕೆಗೂ ಅರ್ಜಿ ಸಲ್ಲಿಸಿರುವುದು ಈ ಸುದ್ದಿ ಕೇವಲ ಗಾಸಿಪ್ ಅಲ್ಲ ಎಂಬುದನ್ನು ಪುಷ್ಠೀಕರಿಸುತ್ತಿದೆ.
ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ ಮೇಲೆ ಅಪಾರ ನಂಬಿಕೆ ಇಟ್ಟಿರುವ ಅಭಿಮಾನಿಗಳಿಗೆ ಇದು ಬಂಪರ್ ಲಾಟರಿಯಂತೆಯೇ ಸರಿ. ಲೋಕೇಶ್ ಅವರ ಇತ್ತೀಚಿನ ಚಿತ್ರ ‘ಕೂಲಿ’ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ, ತಮ್ಮ ನೆಚ್ಚಿನ ಪಾತ್ರ ‘ದಿಲ್ಲಿ’ಯನ್ನು ತೆರೆಮೇಲೆ ಮತ್ತೆ ನೋಡಲು ಫ್ಯಾನ್ಸ್ ತುದಿಗಾಲಿನಲ್ಲಿ ನಿಂತಿದ್ದಾರೆ. ‘ಕೈದಿ 2’ ಚಿತ್ರವನ್ನೇ ‘ದಿಲ್ಲಿ’ ಎಂದು ಮರುನಾಮಕರಣ ಮಾಡಲಾಗಿದೆಯೇ ಅಥವಾ ಇದು ಲೋಕೇಶ್ ಅವರ ಮತ್ತೊಂದು ಮಾಸ್ಟರ್ ಪ್ಲಾನ್ ಆಗಿದೆಯೇ ಎಂಬುದು ಅಧಿಕೃತ ಘೋಷಣೆಯ ನಂತರವಷ್ಟೇ ತಿಳಿಯಲಿದೆ.
ಒಟ್ಟಿನಲ್ಲಿ, ‘ದಿಲ್ಲಿ’ ಅಬ್ಬರ ಶುರುವಾದರೆ ದಕ್ಷಿಣ ಭಾರತದ ಬಾಕ್ಸ್ ಆಫೀಸ್ ದಾಖಲೆಗಳು ಧೂಳೀಪಟವಾಗುವುದು ಗ್ಯಾರಂಟಿ ಎನ್ನುತ್ತಿದ್ದಾರೆ ಸಿನಿ ಪಂಡಿತರು.



