February 21, 2026
Saturday, February 21, 2026
spot_img

ಮುಡಾ ಆಡಿಯೋ ಬಾಂಬ್: ತೀವ್ರ ವಿಚಾರಣೆ ಬಳಿಕ ಸ್ನೇಹಮಯಿ ಕೃಷ್ಣ ರಿಲೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಡಾ ಹಗರಣದ ಬೆನ್ನಲ್ಲೇ ಆಡಿಯೋ ಒಂದನ್ನು ವೈರಲ್ ಮಾಡಿ ಸಂಚಲನ ಸೃಷ್ಟಿಸಿದ್ದ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಸೈಬರ್ ಕ್ರೈಂ ಪೊಲೀಸರು ಸುದೀರ್ಘ ವಿಚಾರಣೆಯ ನಂತರ ಬಿಟ್ಟು ಕಳುಹಿಸಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಲಂಚ ನೀಡಿ ಮುಡಾ ಮಾಜಿ ಆಯುಕ್ತ ನಟೇಶ್ ಮುಂಬಡ್ತಿ ಪಡೆದಿದ್ದಾರೆ ಎನ್ನಲಾದ ಆಡಿಯೋ ತುಣುಕನ್ನು ಸ್ನೇಹಮಯಿ ಕೃಷ್ಣ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದು ತನ್ನ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಎಂದು ಆರೋಪಿಸಿ ನಟೇಶ್ ನೀಡಿದ ದೂರಿನನ್ವಯ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ಈ ನಕಲಿ ಆಡಿಯೋ ಸೃಷ್ಟಿಸಿದ ಆರೋಪದ ಮೇಲೆ ಮೈಸೂರು ಮೂಲದ ವಿನೋದ್ ಎಂಬಾತನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಪ್ರಕರಣದಲ್ಲಿ ಆರೋಪಿಯಾಗಿರುವ ಸ್ನೇಹಮಯಿ ಕೃಷ್ಣ ಅವರಿಗೆ ನೋಟಿಸ್ ನೀಡಿದ್ದ ಪೊಲೀಸರು, ಶನಿವಾರ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದರು. “ಈ ಆಡಿಯೋ ನಿಮಗೆ ಸಿಕ್ಕಿದ್ದು ಎಲ್ಲಿಂದ?”, “ಇದರ ಮೂಲ ಕರ್ತೃ ಯಾರು?”, “ಸತ್ಯಾಸತ್ಯತೆ ತಿಳಿಯದೆ ವೈರಲ್ ಮಾಡಿದ್ದು ಏಕೆ?” ಎಂಬ ಪ್ರಶ್ನೆಗಳನ್ನು ಸೈಬರ್ ಪೊಲೀಸರು ಕೇಳಿದ್ದಾರೆ.

ವಿಚಾರಣೆಯ ನಂತರ ಸ್ನೇಹಮಯಿ ಕೃಷ್ಣ ಅವರನ್ನು ಕಳುಹಿಸಿಕೊಟ್ಟಿರುವ ಪೊಲೀಸರು, ಆಡಿಯೋ ಸೃಷ್ಟಿಕರ್ತ ವಿನೋದ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !