October 17, 2026
Saturday, October 17, 2026
spot_img

ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವ: ಕಣ್ತುಂಬಿಕೊಂಡ ಭಕ್ತಸಾಗರ

ಹೊಸದಿಗಂತ ವರದಿ ಮಡಿಕೇರಿ: 

ಬ್ರಹ್ಮಗಿರಿ ತಪ್ಪಲಿನಲ್ಲಿರುವ ಪವಿತ್ರ ತೀರ್ಥಕ್ಷೇತ್ರ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಶನಿವಾರ ರಾತ್ರಿ 7.52ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಮಾತೆ ಕಾವೇರಿಯು ತೀರ್ಥರೂಪಿಣಿಯಾಗಿ ಆವೀರ್ಭವಿಸುವ ಮೂಲಕ ನೆರೆದಿದ್ದ ಸಹಸ್ರಾರು ಭಕ್ತರನ್ನು ಪುಳಕಿತರನ್ನಾಗಿಸಿದಳು.

ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ತುಲಾ ಸಂಕ್ರಮಣದಂದು ಸಂಜೆ‌ 7.50ರ  ಸಮಯಕ್ಕೆ ತಾಯಿ ಕಾವೇರಿ ಆವೀರ್ಭವಿಸಲಿರುವುದಾಗಿ ಹೇಳಲಾಗಿತ್ತಾದರೂ, ಎರಡು ನಿಮಿಷ ತಡವಾಗಿ ಗೋಚರಿಸುವುದರೊಂದಿಗೆ ಭಕ್ತ ಜನರನ್ನು ಹರಸಿದಳು.

ಈ ಬಾರಿ ರಾತ್ರಿ ವೇಳೆಯಲ್ಲಿ ತೀರ್ಥೋದ್ಭವವಾಗುತ್ತಿದ್ದರೂ, ಈ ಅಪೂರ್ವ ಘಟನೆಯನ್ನು ಕಣ್ತುಂಬಿಕೊಳ್ಳಲು ಬೆಳಗಿನಿಂದಲೇ ತಲಕಾವೇರಿಯತ್ತ ಅಸಂಖ್ಯಾತ ಭಕ್ತಾದಿಗಳು ಆಗಮಿಸುತ್ತಿದ್ದರು. ಭಾಗಮಂಡಲದಲ್ಲಿ ಪಿಂಡಪ್ರದಾನ ಮುಗಿಸಿ ಭಗಂಡೇಶ್ವರ ಸನ್ನಿಧಿಯಲ್ಲಿ ಪೂಜಾ ವಿಧಿಗಳನ್ನು ಪೂರೈಸಿ ತಲಕಾವೇರಿಯತ್ತ ಸಾಗುತ್ತಿದ್ದ ದೃಶ್ಯ ಗೋಚರಿಸಿತು. ಭಕ್ತಾದಿಗಳ ಅನುಕೂಲಕ್ಕಾಗಿ ಭಾಗಮಂಡಲದಿಂದ ತಲಕಾವೇರಿಗೆ 25 ಬಸ್’ಗಳನ್ನು ನಿಯೋಜಿಸಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಅತ್ತ ತಲಕಾವೇರಿ ಕ್ಷೇತ್ರದಲ್ಲಿ ಅರ್ಚಕ ಪ್ರಶಾಂತ ಆಚಾರ್ ನೇತೃತ್ವದಲ್ಲಿ‌ ಹತ್ತಾರು ಅರ್ಚಕರಿಂದ ಶನಿವಾರ ಅಪರಾಹ್ನದಿಂದ ಮಹಾ ಸಂಕಲ್ಪ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳು ಆರಂಭಗೊಂಡವು.

ಮತ್ತೊಂದಡೆ ಕ್ಷೇತ್ರದಲ್ಲಿ ನಿರ್ಮಿಸಲಾದ ಸಾಂಸ್ಕೃತಿಕ ವೇದಿಕೆಯಲ್ಲಿ ಭಜನೆ, ಭಕ್ತಿಗೀತೆಗಳು ಮೊಳಗಿದವು.

ಸಂಜೆಯಾಗುತ್ತಿದ್ದಂತೆ ಅರ್ಚಕ ಸಮೂಹದಿಂದ ಕಾವೇರಿ ಮಾತೆಗೆ ಸಾಂಪ್ರದಾಯಿಕ ಪೂಜೆ, ಮಂಗಳಾರತಿ ನೆರವೇರುತ್ತಿದ್ದಂತೆ, ಅರ್ಚಕರ ಮಂತ್ರಘೋಷ ಹಾಗೂ ನೆರೆದಿದ್ದ ಸಹಸ್ರಾರು ಭಕ್ತ ಜನರ ‘ಜೈ ಜೈ ಮಾತಾ ಕಾವೇರಿ ಮಾತಾ, ಉಕ್ಕಿ ಬಾ ಉಕ್ಕಿ ಬಾ ಕಾವೇರಮ್ಮ ಉಕ್ಕಿ ಬಾ’   ಎಂಬ ಜಯಘೋಷಗಳು ಮುಗಿಲು ಮುಟ್ಟಿದ್ದವು.‌ ಇದರ ನಡುವೆಯೇ ನಿಗದಿತ ಸಮಯಕ್ಕೆ ಸರಿಯಾಗಿ   ಬ್ರಹ್ಮಕುಂಡಿಕೆಯಲ್ಲಿ ಕಾವೇರಿಯು ತೀರ್ಥರೂಪಿಣಿಯಾಗಿ ಗೋಚರಿಸುತ್ತಿದ್ದಂತೆ ಕ್ಷೇತ್ರದಲ್ಲಿ ಸೇರಿದ್ದ ಸಹಸ್ರಾರು ಭಕ್ತರು ಭಾವಪರವಶರಾದರು.

ತೀರ್ಥೋದ್ಭವಕ್ಕೆ ಮುನ್ನ ಸಹಸ್ರಾರು ಭಕ್ತಾದಿಗಳು ಭಾಗಮಂಡಲದಿಂದ ತಲಕಾವೇರಿವರೆಗೆ ಪಾದಯಾತ್ರೆ ಮೂಲಕ ಆಗಮಿಸಿದ್ದರು. ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಪೊಲೀಸರು ನಿರ್ಮಿಸಿದ್ದ ತಡೆಯನ್ನು ಭೇದಿಸಿ ಭಕ್ತಾದಿಗಳು ತೀರ್ಥಕ್ಕಾಗಿ ಮುಗಿಬಿದ್ದರು.

ತೀರ್ಥೋದ್ಭವವಾಗುತ್ತಿದಂತೆ ಅರ್ಚಕರು ಪವಿತ್ರ ತೀರ್ಥನ್ನು ಭಕ್ತಾದಿಗಳ ಮೇಲೆ ಪ್ರೋಕ್ಷಣೆ ಮಾಡಿದರು. ತೀರ್ಥ ಪಡೆದ ಭಕ್ತಜನರು ಪುಳಕಿತರಾದರು.

ಗಣ್ಯರ ಉಪಸ್ಥಿತಿ:

ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ. ನರೇಂದ್ರಸ್ವಾಮಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಪತ್ನಿ ಕಾಂಚನ, ಮಡಿಕೇರಿ ಶಾಸಕ ಡಾ.ಮಂಥರ್ ಗೌಡ, ಜಿಲ್ಲಾಧಿಕಾರಿ ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ಕ್ಷೇತ್ರದ‌ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ, ಭಗಂಡೇಶ್ವರ ದೇವಾಲಯ ತಕ್ಕ ಮುಖ್ಯಸ್ಥ‌ ಬಳ್ಳಡ್ಕ ಅಪ್ಪಾಜಿ,ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾನಂಡ ಪ್ರಥ್ಯು, ದೇವಾಲಯದ ಇಒ ಚಂದ್ರಶೇಖರ್‌‌ ಸೇರಿದಂತೆ ಅನೇಕರು ಕಾವೇರಿ ತೀರ್ಥೋದ್ಭವದ ಅವಿಸ್ಮರಣೀಯ ಕ್ಷಣವನ್ನು ಕಣ್ತುಂಬಿಕೊಂಡರು.

Must Read