February 24, 2026
Tuesday, February 24, 2026
spot_img

ಕಮಲ್ ಮೌಲಾ ಮಸೀದಿಯೊಳಗೆ ದೇಗುಲದ ಅವಶೇಷಗಳು ಪತ್ತೆ: ಕೋರ್ಟ್ ಗೆ ವರದಿ ನೀಡಿದ ಎಎಸ್​ಐ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರಾಚೀನ ದೇವಾಲಯದ ಅವಶೇಷಗಳನ್ನು ಬಳಸಿ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಭೋಜ್​ಶಾಲಾ ಸಂಕೀರ್ಣದೊಳಗೆ ಇರುವ ಕಮಲ್ ಮೌಲಾ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಭಾರತೀಯ ಪುರಾತತ್ವ ಸಮೀಕ್ಷೆಯ ವರದಿ ಹೇಳಿದೆ.

ಈ ಎಎಸ್​ಐ ವರದಿಯನ್ನು ಮದ್ಯಪ್ರದೇಶ ಹೈಕೋರ್ಟ್​​ನ ಇಂದೋರ್ ಪೀಠಕ್ಕೆ ಸಲ್ಲಿಸಿದ್ದು, ಅದರಲ್ಲಿ ಈ ಕಮಾಲ್ ಮೌಲಾ ಮಸೀದಿಯನ್ನು ಹಿಂದು ಸಮುದಾಯ ವಾಗ್ದೇವಿ (ದೇವಿ ಸರಸ್ವತಿ) ದೇವಾಲಯವೆಂದು ಪರಿಗಣಿಸುತ್ತದೆ. ಆದರೆ ಮುಸ್ಲಿಂ ಪಕ್ಷದವರು ಇದನ್ನು 11ನೇ ಶತಮಾನದ ಕಮಾಲ್ ಮೌಲಾ ಮಸೀದಿಯೆಂದು ಹೇಳಿಕೊಳ್ಳುತ್ತಾರೆ. ವೈಜ್ಞಾನಿಕ ತನಿಖೆಗಳು, ಸಮೀಕ್ಷೆಗಳು ಮತ್ತು ಉತ್ಪನನಗಳು, ವಾಸ್ತುಶಿಲ್ಪದ ಅವಶೇಷಗಳು, ಶಾಸನಗಳು, ಕಲೆ ಮತ್ತು ಶಿಲ್ಪಗಳ ಅಧ್ಯಯನ ಮತ್ತು ವಿಶ್ಲೇಷಣೆಯ ಆಧಾರದ ಮೇಲೆ ಈ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಪುರಾತತ್ವ ಇಲಾಖೆ ಹೇಳಿದೆ.

10 ಸಂಪುಟಗಳಲ್ಲಿ ಬಿಡುಗಡೆ ಮಾಡಲಾದ ಸುಮಾರು 2,000 ಪುಟಗಳ ವರದಿಯನ್ನು ASI ಹೆಚ್ಚುವರಿ ಮಹಾನಿರ್ದೇಶಕ ಅಲೋಕ್ ತ್ರಿಪಾಠಿ ನೇತೃತ್ವ ವಹಿಸಿದ್ದರು.

ಇಲ್ಲಿ ಪರಮಾರ ವಂಶದ ಕಾಲದ ಸುಮಾರು 12ನೇ ಶತಮಾನ ಮಂದಿರದ ಅವಶೇಷಗಳು ಕಂಡುಬಂದಿವೆ. ಮಸೀದಿಯ ನಿರ್ಮಾಣದಲ್ಲಿ ಹಿಂದಿನ ಮಂದಿರಗಳ ಭಾಗಗಳನ್ನು ಮರುಬಳಕೆ ಮಾಡಲಾಗಿದೆ. ಉತ್ಖನನದ ಸಮಯದಲ್ಲಿ ಒಟ್ಟು 94 ಶಿಲ್ಪಗಳು ಮತ್ತು ಅವುಗಳ ಅವಶೇಷಗಳು ಕಂಡುಬಂದವು, ಅವುಗಳಲ್ಲಿ ಹಲವು ಹಾನಿಗೊಳಗಾಗಿದ್ದವು. ಇವುಗಳಲ್ಲಿ ಗಣೇಶ, ಬ್ರಹ್ಮ, ನರಸಿಂಹ ಮತ್ತು ಭೈರವ ಸೇರಿದಂತೆ ಹಲವಾರು ದೇವತೆಗಳ ಕೆತ್ತನೆಗಳು ಹಾಗೂ ಮಾನವ ಮತ್ತು ಪ್ರಾಣಿಗಳ ಆಕೃತಿಗಳು ಸೇರಿವೆ. ಈ ಸ್ಥಳವು ಸರಸ್ವತಿ ದೇವಿಗೆ ಅರ್ಪಿತವಾದ ಪ್ರಾಚೀನ ದೇವಾಲಯವಾಗಿರಬಹುದು ಎಂದು ಎಎಸ್​ಐ ವರದಿಯಲ್ಲಿ ತಿಳಿಸಿದೆ.

ವಿಚಾರಣೆಯಲ್ಲಿ ಕೋರ್ಟ್ ಎರಡು ವಾರಗಳೊಳಗೆ ಎಲ್ಲಾ ಪಕ್ಷಗಳಿಂದ ವರದಿಗೆ ಸಂಬಂಧಿಸಿದ ಆಕ್ಷೇಪಗಳು, ಅಭಿಪ್ರಾಯಗಳು, ಸಲಹೆಗಳನ್ನು ಸಲ್ಲಿಸುವಂತೆ ನಿರ್ದೇಶಿಸಿದೆ. ಮುಂದಿನ ವಿಚಾರಣೆ ಮಾ.16ಕ್ಕೆ ನಿಗದಿಯಾಗಿದೆ.

ಧಾರ್‌ನಲ್ಲಿರುವ ಐತಿಹಾಸಿಕ ಸಂಕೀರ್ಣದ ವಿವಾದದ ನಂತರ, ಎಎಸ್‌ಐ ಏಪ್ರಿಲ್ 7, 2003 ರಂದು ಆದೇಶ ಹೊರಡಿಸಿತ್ತು, ಪ್ರತಿ ಮಂಗಳವಾರ ಹಿಂದುಗಳು ಆ ಸ್ಥಳದಲ್ಲಿ ಪೂಜೆ ಸಲ್ಲಿಸಲು ಮತ್ತು ಪ್ರತಿ ಶುಕ್ರವಾರ ಮುಸ್ಲಿಮರು ಅಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !