October 18, 2026
Sunday, October 18, 2026
spot_img

ಸಚಿವರ ಮನವಿಗೆ ಮಣಿದ ರಾಜ್ಯಪಾಲರು: ದಲಿತ ಸಮುದಾಯದ ಪಾಲಿಗೆ ಇಂದು ‘ಐತಿಹಾಸಿಕ ದಿನ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಲವು ದಿನಗಳ ಕಾಲ ಕುತೂಹಲ ಮತ್ತು ಗೊಂದಲಗಳಿಗೆ ಕಾರಣವಾಗಿದ್ದ ಕರ್ನಾಟಕ ಅನುಸೂಚಿತ ಜಾತಿಗಳ (ಉಪ ವರ್ಗೀಕರಣ) ವಿಧೇಯಕ-2025 ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಅಧಿಕೃತವಾಗಿ ಸಹಿ ಹಾಕಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಬಹುದಿನಗಳ ಬೇಡಿಕೆಯಾಗಿದ್ದ ಒಳಮೀಸಲಾತಿ ಜಾರಿಗೆ ಇದ್ದ ಅತಿದೊಡ್ಡ ಕಾನೂನು ಅಡೆತಡೆ ನಿವಾರಣೆಯಾದಂತಾಗಿದೆ.

ವಿಧೇಯಕದ ಕುರಿತು ಕೆಲವು ಸ್ಪಷ್ಟನೆಗಳನ್ನು ಕೋರಿ ಜನವರಿ 9 ರಂದು ರಾಜ್ಯಪಾಲರು ಫೈಲ್ ಅನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು. ಇದರಿಂದಾಗಿ ನೇಮಕಾತಿ ಪ್ರಕ್ರಿಯೆಗಳು ಸ್ಥಗಿತಗೊಂಡು ಉದ್ಯೋಗಾಕಾಂಕ್ಷಿಗಳಲ್ಲಿ ಆತಂಕ ಮೂಡಿತ್ತು.

ಈ ಹಿನ್ನೆಲೆಯಲ್ಲಿ, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಚಿವರ ಸಭೆಯ ನಂತರ, ದಲಿತ ಸಮುದಾಯದ ಸಚಿವರ ನಿಯೋಗವೊಂದು ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿತು. ಧಾರವಾಡದಲ್ಲಿ ನಡೆಯುತ್ತಿರುವ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಮತ್ತು ಖಾಲಿ ಹುದ್ದೆಗಳ ಭರ್ತಿಗೆ ಆಗುತ್ತಿರುವ ತೊಂದರೆಯನ್ನು ಮನವರಿಕೆ ಮಾಡಿಕೊಟ್ಟ ಬೆನ್ನಲ್ಲೇ, ರಾಜ್ಯಪಾಲರು ವಿಧೇಯಕಕ್ಕೆ ಅನುಮೋದನೆ ನೀಡಿದ್ದಾರೆ.

ಮಾರ್ಚ್ 6 ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ನ ಮುನ್ನವೇ ಈ ಮಹತ್ವದ ಬೆಳವಣಿಗೆ ನಡೆದಿದ್ದು, ಸರ್ಕಾರಕ್ಕೆ ಮತ್ತು ದಲಿತ ಸಮುದಾಯದ ಹೋರಾಟಗಾರರಿಗೆ ದೊಡ್ಡ ಮಟ್ಟದ ಆನೆಬಲ ಬಂದಂತಾಗಿದೆ.

Must Read