February 27, 2026
Friday, February 27, 2026
spot_img

T20 ವಿಶ್ವಕಪ್ | ಸೆಮಿಸ್ ಸ್ಥಾನ ಭದ್ರಪಡಿಸಿಕೊಂಡ ದಕ್ಷಿಣ ಆಫ್ರಿಕಾ: ವಿಂಡೀಸ್‌ಗೆ ಭಾರೀ ಸೋಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್ ಸೂಪರ್ 8 ಹಂತದ ಮಹತ್ವದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿತು.

ಎರಡೂ ತಂಡಗಳು ತಮ್ಮ ಮೊದಲ ಪಂದ್ಯಗಳಲ್ಲಿ ಜಯಗಳಿಸಿದ್ದರಿಂದ ಈ ಪಂದ್ಯ ನಿರ್ಣಾಯಕವಾಗಿತ್ತು. ಆದರೆ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಸಂಪೂರ್ಣ ಪ್ರಾಬಲ್ಯ ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆದರೂ ಮಧ್ಯಕ್ರಮ ಸಂಪೂರ್ಣ ವಿಫಲವಾಯಿತು. ಶೈ ಹೋಪ್, ಹೆಟ್ಮೈಯರ್, ಕಿಂಗ್ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ಬೇಗನೇ ಪೆವಿಲಿಯನ್ ಸೇರಿದರು. ಸಂಕಷ್ಟದ ಸಂದರ್ಭದಲ್ಲಿ ರೊಮಾರಿಯೊ ಶೆಫರ್ಡ್ ಹಾಗೂ ಜೇಸನ್ ಹೋಲ್ಡರ್ ಎಂಟನೇ ವಿಕೆಟ್‌ಗೆ ಅಮೂಲ್ಯ ಜೊತೆಯಾಟ ಕಟ್ಟಿದರು. ಹೋಲ್ಡರ್ 49 ರನ್‌ಗಳಿಸಿದರೆ, ಶೆಫರ್ಡ್ ಅಜೇಯ 52 ರನ್ ಬಾರಿಸಿ ತಂಡವನ್ನು 176 ರನ್‌ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ತಲುಪಿಸಿದರು.

177 ರನ್ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಸ್ಫೋಟಕ ಆರಂಭ ಕಂಡಿತು. ಕ್ವಿಂಟನ್ ಡಿ ಕಾಕ್ ಮತ್ತು ನಾಯಕ ಐಡೆನ್ ಮಾರ್ಕ್ರಾಮ್ ಪವರ್‌ಪ್ಲೇಯಲ್ಲೇ ರನ್ ವೇಗ ಹೆಚ್ಚಿಸಿದರು. ಡಿ ಕಾಕ್ 47 ರನ್ ಗಳಿಸಿ ಔಟಾದರೂ, ಮಾರ್ಕ್ರಾಮ್ ಅರ್ಧಶತಕದೊಂದಿಗೆ 82 ರನ್ ಅಜೇಯವಾಗಿ ಬಾರಿಸಿದರು. ರಯಾನ್ ರಿಕಲ್ಟನ್ ಸಹ 45 ರನ್ ಮಾಡಿ ಜೊತೆಯಾದರು. ದಕ್ಷಿಣ ಆಫ್ರಿಕಾ ಕೇವಲ 16.1 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿ 9 ವಿಕೆಟ್‌ಗಳ ಸುಲಭ ಜಯ ದಾಖಲಿಸಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !