February 27, 2026
Friday, February 27, 2026
spot_img

477 ರನ್‌ಗಳ ಭಾರಿ ಮುನ್ನಡೆ: ಚೊಚ್ಚಲ ರಣಜಿ ಮುಕುಟದತ್ತ ಜಮ್ಮು-ಕಾಶ್ಮೀರದ ನಡಿಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಕೋಟೆ ಎಂದೇ ಪರಿಗಣಿಸಲ್ಪಟ್ಟಿರುವ ಹುಬ್ಬಳ್ಳಿಯ ಮೈದಾನದಲ್ಲಿ ಈಗ ಜಮ್ಮು ಮತ್ತು ಕಾಶ್ಮೀರ ತಂಡ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. 2025-26ರ ಸಾಲಿನ ರಣಜಿ ಟ್ರೋಫಿ ಫೈನಲ್ ಪಂದ್ಯದ ನಾಲ್ಕನೇ ದಿನದ ಅಂತ್ಯಕ್ಕೆ ಜೆಕೆ ತಂಡ ಪೂರ್ಣ ಹಿಡಿತ ಸಾಧಿಸಿದ್ದು, ಕರ್ನಾಟಕದ ರಣಜಿ ಕನಸು ಬಹುತೇಕ ಭಗ್ನಗೊಂಡಿದೆ.

ಪಂದ್ಯದ ಆರಂಭದಿಂದಲೂ ಕರ್ನಾಟಕದ ವೇಗಿಗಳನ್ನು ಕಾಡಿದ್ದ ಜಮ್ಮು ಮತ್ತು ಕಾಶ್ಮೀರ, ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 584 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕಕ್ಕೆ ಜೆಕೆ ಬೌಲರ್‌ಗಳು ಸಿಂಹಸ್ವಪ್ನವಾದರು. ಮಾಜಿ ನಾಯಕ ಮಯಾಂಕ್ ಅಗರ್ವಾಲ್ ಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸಿದರೂ, ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಪರಿಣಾಮ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 293 ರನ್‌ಗಳಿಗೆ ಆಲೌಟ್ ಆಗಿ, 291 ರನ್‌ಗಳ ಭಾರಿ ಹಿನ್ನಡೆ ಅನುಭವಿಸಿತು.

ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಮುಂದುವರೆಸಿರುವ ಜೆಕೆ ತಂಡ, ನಾಲ್ಕನೇ ದಿನದ ಆಟದ ಮುಕ್ತಾಯಕ್ಕೆ 4 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿದೆ. ಇದರೊಂದಿಗೆ ಒಟ್ಟು ಮುನ್ನಡೆ 477 ರನ್‌ಗಳಿಗೆ ಏರಿಕೆಯಾಗಿದೆ.

ಸದ್ಯದ ಪರಿಸ್ಥಿತಿಯನ್ನು ನೋಡಿದರೆ, ಐದನೇ ದಿನದ ಆಟವು ಕೇವಲ ಔಪಚಾರಿಕತೆಯಾಗಲಿದ್ದು, ಜಮ್ಮು ಮತ್ತು ಕಾಶ್ಮೀರ ತಂಡ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ರಣಜಿ ಟ್ರೋಫಿಯನ್ನು ಎತ್ತಿಹಿಡಿಯುವುದು ಖಚಿತವಾದಂತಿದೆ. ಅನುಭವಿ ಆಟಗಾರರ ದಂಡೇ ಇದ್ದರೂ ತವರು ನೆಲದಲ್ಲಿ ಕರ್ನಾಟಕ ತಂಡ ಮಂಕಾಗಿರುವುದು ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !