ಹೊಸದಿಗಂತ ವರದಿ ಮಡಿಕೇರಿ:
ಕರ್ನಾಟಕ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಕೊಡಗು ಜಿಲ್ಲೆಯ ವೀರಾಜಪೇಟೆ ಮೂಲದ, ಬೆಂಗಳೂರು ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಸ್.ಭರತ್ ಕುಮಾರ್ ಅವರು ಅಧಿಕಾರ ಸ್ವೀಕರಿಸಿದರು.
ಬೆಂಗಳೂರಿನ ಲೋಕ ಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಕೆ.ಎಸ್.ಭರತ್ ಕುಮಾರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಇವರೊಂದಿಗೆ ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಉಷಾರಾಣಿ ಹಾಗೂ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ವಿ.ಭವಾನಿ ಅವರು ಕೂಡಾ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದರು.
ಈ ಮೂವರನ್ನು ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಗಳ ಹುದ್ದೆಗಳಿಗೆ ಪರಿಗಣಿಸುವಂತೆ ಸೆ.10ರಂದು ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿತ್ತು.
ಇದನ್ನೂ ಓದಿ:
ಕೊಡಗಿನ ಭರತ್ ಕುಮಾರ್
ಬೆಂಗಳೂರು ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಸ್.ಭರತ್ ಕುಮಾರ್ ಅವರು ವೀರಾಜಪೇಟೆಯವರಾಗಿದ್ದು, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಕೆ.ಬಿ.ಶಾಂತಪ್ಪ ಹಾಗೂ ರತ್ನಮ್ಮ ಅವರ ಜೇಷ್ಠ ಪುತ್ರರಾಗಿದ್ದಾರೆ.
ಇವರು 2002 ರಿಂದ 2004 ರವರೆಗೆ ಜಮ್ಶೆಡ್ ಪುರದ ಟಾಟಾ ಸ್ಟೀಲ್ ಸಂಸ್ಥೆಯಲ್ಲಿ ಮುಖ್ಯ ಕಾನೂನು ಸಲಹೆಗಾರರಾಗಿ, 2004 ರಿಂದ 2015 ರವರೆಗೆ ಕರ್ನಾಟಕ ಹೈಕೋರ್ಟ್ ನ ವಕೀಲರಾಗಿ ಕಾರ್ಯನಿರ್ವಹಿಸಿದ್ದರು. 2015ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾಗಿ 2019 ರವರೆಗೆ ತುಮಕೂರು ಜಿಲ್ಲಾ ನ್ಯಾಯಾಧೀಶರಾಗಿ ಕಾರ್ಯನಿರ್ವಹಣೆ ಮಾಡಿದ್ದರು.
2019 ರಿಂದ 2020ರ ವರೆಗೆ ಮೈಸೂರು ಜಿಲ್ಲಾ ನ್ಯಾಯಾಧೀಶರಾಗಿ , 2020 ರಿಂದ ಕರ್ನಾಟಕ ಹೈಕೋರ್ಟ್ ನಲ್ಲಿ ರಿಜಿಸ್ಟ್ರಾರ್ ಜುಡಿಶಿಯಲ್, ರಿಜಿಸ್ಟ್ರಾರ್ ವೆಜಿಲೆನ್ಸ್ ಹಾಗೂ ರಿಜಿಸ್ಟ್ರಾರ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದು, 2026 ಜೂನ್ 1 ರಿಂದ ಬೆಂಗಳೂರು ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಕರ್ನಾಟಕ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಒಂದರಿಂದ ಏಳನೇ ತರಗತಿಯವರೆಗೆ ಅಮ್ಮತ್ತಿಯ ಗುಡ್ ಶಫರ್ಡ್ ಶಾಲೆ, ಎಂಟನೇ ತರಗತಿಯಿಂದ ಪಿಯುಸಿಯವರೆಗೆ ಅಳಿಕೆಯ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಿರುವ ಭರತ್ ಕುಮಾರ್, ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾಯುನಿವರ್ಸಿಟಿಯಲ್ಲಿ ವಕೀಲ ಪದವಿ ಪಡೆದರು. ಕಾಲೇಜ್ ನ ಕುಲಪತಿಗಳಾಗಿದ್ದ ಅಂದಿನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾದ ಆನಂದ್ ಅವರಿಂದ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯೊಂದಿಗೆ ಚಿನ್ನದ ಪದಕ ಪಡೆದಿರುವ ಹೆಗ್ಗಳಿಕೆಗೆ ಕೆ.ಎಸ್.ಭರತ್ ಕುಮಾರ್ ಪಾತ್ರರಾಗಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೂತನ ನ್ಯಾಯಮೂರ್ತಿಯವರನ್ನು ಅಭಿನಂದಿಸಿದರು.



