ಹೊಸದಿಗಂತ ಮಡಿಕೇರಿ:
ಬಲ್ಲಮಾವಟಿಯಲ್ಲಿ ಆಯೋಜಿಸಲಾಗಿರುವ ‘ಬೃಹತ್ ಹಿಂದು ಸಂಗಮ’ ಕಾರ್ಯಕ್ರಮದ ಪ್ರಚಾರದ ವೇಳೆ ಅಹಿತಕರ ಘಟನೆಯೊಂದು ಸಂಭವಿಸಿದೆ. ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದ ಹಿಂದು ಕಾರ್ಯಕರ್ತ ಗೌತಮ್ ಎಂಬವರ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ನಾಪೋಕ್ಲು ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಶನಿವಾರ ನಡೆಯಲಿರುವ ಸಮಾವೇಶದ ನಿಮಿತ್ತ ಗೌತಮ್ ಅವರು ಪಿಕ್‌ಅಪ್ ವಾಹನದಲ್ಲಿ ಮೈಕ್ ಮೂಲಕ ಪ್ರಚಾರ ಮಾಡುತ್ತಿದ್ದರು. ಶುಕ್ರವಾರ ಸಂಜೆ ನಾಪೋಕ್ಲು ಪಟ್ಟಣದ ಪೊನ್ನಾಡ್ ಸೂಪರ್ ಮಾರ್ಕೆಟ್ ಮುಂಭಾಗ ತಲುಪಿದಾಗ, ಸಿದ್ದಿಕ್ ನೇತೃತ್ವದ ಗುಂಪು ಪ್ರಚಾರ ನಡೆಸದಂತೆ ತಡೆದು ಹಲ್ಲೆ ನಡೆಸಿದೆ ಎಂದು ದೂರಲಾಗಿದೆ. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಗೌತಮ್ ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ನಾಪೋಕ್ಲು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು. “ಕಾಂಗ್ರೆಸ್ ನಾಯಕರ ಪ್ರಭಾವ ಬಳಸಿ ಈ ಕೃತ್ಯ ಎಸಗಲಾಗಿದೆ” ಎಂದು ಆರೋಪಿಸಿದ ಪ್ರತಿಭಟನಾಕಾರರು, ರಸ್ತೆ ತಡೆ ನಡೆಸಿ ಕೂಡಲೇ ಬಂಧನಕ್ಕೆ ಆಗ್ರಹಿಸಿದರು. ಶನಿವಾರ ಮಧ್ಯಾಹ್ನದೊಳಗೆ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದರು.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರ ಮಾರ್ಗದರ್ಶನದಲ್ಲಿ, ಪೊಲೀಸರು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಸಿದ್ದಿಕ್, ಸುಹೇಲ್, ನಭಿ ಮತ್ತು ರಶೀದ್ ಎಂಬ ನಾಲ್ವರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಎಸ್‌ಪಿ ಸ್ಪಷ್ಟಪಡಿಸಿದ್ದಾರೆ.



