November 5, 2026
Thursday, November 5, 2026
spot_img

ಉದ್ಘಾಟನೆಗೆ ತಯಾರಾಗಿರುವ ಪಿಂಕ್‌ ಮೆಟ್ರೋ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಸಂಪೂರ್ಣ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ನಮ್ಮ ಮೆಟ್ರೋ ಇಲ್ಲದೇ ನಿತ್ಯದ ಓಡಾಟವನ್ನು ಇಮ್ಯಾಜಿನ್‌ ಮಾಡೋದಕ್ಕೂ ಆಗೋದಿಲ್ಲ ಎಂದು ಹೇಳುವ ಪ್ರಯಾಣಿಕರು ಒಂದು ಕಡೆಯಾದ್ರೆ, ನಮ್ಮ ಏರಿಯಾ ಬಳಿಯೂ ಮೆಟ್ರೋ ಇರಬೇಕಿತ್ತು ಎಂದು ಹೇಳುವ ಜನ ಮತ್ತೊಂದು ಕಡೆ. ಈ ಎಲ್ಲದರ ಮಧ್ಯೆ ಇದೇ ತಿಂಗಳ 13ರಂದು ನಮ್ಮ ಮೆಟ್ರೋದ ಪಿಂಕ್‌ ಲೈನ್‌ ಉದ್ಘಾಟನೆಯಾಗಲಿದೆ.

ಪ್ರಧಾನಿ ಮೋದಿ ಮೆಟ್ರೋ ಪಿಂಕ್‌ ಲೈನ್‌ ಮೆಟ್ರೋವನ್ನು ಉದ್ಘಾಟನೆ ಮಾಡಲಿದ್ದಾರೆ. ದೆಹಲಿ ಬಳಿಕ ದೇಶದ ಎರಡನೇ ಅತಿದೊಡ್ಡ ಮೆಟ್ರೋ ಜಾಲ ಎಂಬ ಹೆಗ್ಗಳಿಕೆಗೆ ಬೆಂಗಳೂರಿನ ನಮ್ಮ ಮೆಟ್ರೋ ಪಾತ್ರವಾಗಲಿದೆ. ಬೆಂಗಳೂರಿನ ಬಹುದೊಡ್ಡ ಕಿರಿಕಿರಿಯಾದ ಟ್ರಾಫಿಕ್‌ ಸಮಸ್ಯೆಯನ್ನು ಕಡಿಮೆ ಮಾಡುವುದರಲ್ಲಿ ನಮ್ಮ ಮೆಟ್ರೋ ಬಹುದೊಡ್ಡ ಪಾಲನ್ನು ಹೊಂದಿದೆ. ಈ ನೂತನ ಮಾರ್ಗ ಆರಂಭದೊಂದಿಗೆ ಬೆಂಗಳೂರು ಮೆಟ್ರೋ ಸಂಪರ್ಕ ಜಾಲವು ಬರೊಬ್ಬರಿ 100 ಕಿಲೋಮೀಟರ್ ಗಡಿ ದಾಟಿ ಇತಿಹಾಸ ಬರೆಯಲಿದೆ. 2027ರ ವೇಳೆಗೆ ಮೆಟ್ರೋ ಜಾಲವನ್ನು 170 ಕಿ.ಮೀ.ಗೆ ವಿಸ್ತರಿಸುವ ಬೃಹತ್ ಗುರಿಯೂ ಇದೆ.

ವಿಶೇಷತೆ ಏನು?

ಪಿಂಕ್‌ ಲೈನ್‌ ಮೆಟ್ರೋದ ಮೊದಲ ಹಂತ ಇದಾಗಿದ್ದು, ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ ಉದ್ದದ ಎಲಿವೇಟೆಡ್‌ ವಿಭಾಗ ಇದಾಗಿದೆ.

ಪಿಂಕ್‌ ಲೈನ್‌ ಮೆಟ್ರೋದಲ್ಲಿ ಆರು ನಿಲ್ದಾಣಗಳಿವೆ. ಕಾಳೇನ ಅಗ್ರಹಾರ ಸ್ಟಾರ್ಟಿಂಗ್‌ ಪಾಯಿಂಟ್‌ ಆಗಿದ್ದು, ತಾವರೆಕೆರೆಯಲ್ಲಿ ಮೆಟ್ರೋ ಕೊನೆಯಾಗಲಿದೆ. ಮಧ್ಯದಲ್ಲಿ ಹುಳಿಮಾವು, ಐಐಎಂಬಿ, ಜೆ.ಪಿ.ನಗರ ನಾಲ್ಕನೇ ಹಂತ, ಜಯದೇವ ಆಸ್ಪತ್ರೆ ಸ್ಟಾಪ್‌ ಇರಲಿದೆ. ಇಲ್ಲಿ ಹಳದಿ ಲೈನ್‌ ಜೊತೆ ಇಂಟರ್‌ಚೇಂಜ್‌ಗೆ ಅವಕಾಶ ಇದೆ. ಒಟ್ಟಾರೆ 21.26 ಕಿ.ಮೀ ಉದ್ದದ ಮಾರ್ಗ ಇದಾಗಿದ್ದು, ಡೈರಿ ಸರ್ಕಲ್‌ನಿಂದ ನಾಗವಾರದವರೆಗಿನ 13.8 ಕಿ.ಮೀ ಅಂಡರ್‌ಗ್ರೌಂಡ್‌ ವಿಭಾಗದ ಕೆಲಸಗಳು ಅಂತಿಮ ಹಂತದಲ್ಲಿವೆ.

ನವೆಂಬರ್ 13ರಂದು ಗುಲಾಬಿ ಮಾರ್ಗ ಉದ್ಘಾಟನೆಯಾಗುವುದರೊಂದಿಗೆ ಬೆಂಗಳೂರು ಮೆಟ್ರೋದ ಒಟ್ಟು ಕಾರ್ಯಾಚರಣೆಯ ಜಾಲವು ಅಧಿಕೃತವಾಗಿ 100 ಕಿ.ಮೀ ಮೈಲಿಗಲ್ಲನ್ನು ದಾಟಲಿದೆ. ಇದು ನಗರದ ಸಾರ್ವಜನಿಕ ಸಾರಿಗೆ ಇತಿಹಾಸದಲ್ಲಿ ಬಹುದೊಡ್ಡ ಸಾಧನೆಯಾಗಿದ್ದು, ದೇಶದಲ್ಲೇ ಅತಿ ಉದ್ದದ ಮೆಟ್ರೋ ಜಾಲ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರಿನ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ.

ಪಿಂಕ್‌ ಲೈನ್‌ ಮೆಟ್ರೋದಲ್ಲಿ ಪೀಕ್‌ ಅವರ್‌ ವೇಳೆ ಪ್ರತೀ ಎಂಟು ನಿಮಿಷಕ್ಕೊಂದು ರೈಲು ಸಂಚರಿಸುವ ನಿರೀಕ್ಷೆ ಇದೆ. ಈ ಹಿಂದೆ ಐದು ನಿಮಿಷಕ್ಕೊಂದು ರೈಲನ್ನು ಓಡಿಸುವ ಬಗ್ಗೆ ಚರ್ಚೆಯಾಗಿತ್ತು. ಆದರೆ ಪಿಂಕ್‌ ಲೈನ್‌ನ ಎಲಿವೇಟೆಡ್‌ ಮಾರ್ಗವು ಬೇರೆ ಮೆಟ್ರೋಗಳಿಗೆ ಹೋಲಿಸಿದರೆ ಚಿಕ್ಕ ಮಾರ್ಗವಾಗಿದೆ. ಹೀಗಾಗಿ ಟರ್ಮಿನಲ್‌ ನಿಲ್ದಾಣಗಳಲ್ಲಿ ರೈಲುಗಳನ್ನು ತಿರುಗಿಸಲು ಹೆಚ್ಚು ಸಮಯವಾಗುತ್ತದೆ. ಪಿಂಕ್‌ ಮೆಟ್ರೋ ಲೈನ್‌ನ ಎಲಿವೇಟೆಡ್‌ ಮಾರ್ಗದ ಸಾರ್ವಜನಿಕ ಸೇವೆ ನವೆಂಬರ್ 14ರಿಂದ ಆರಂಭವಾಗಲಿದೆ. ಉದ್ಘಾಟನೆಯ ದಿನದಂದು ಪ್ರಧಾನಿ ಮೋದಿ ಖುದ್ದು ಮೆಟ್ರೋದಲ್ಲಿ ಪ್ರಯಾಣಿಸುವ ಸಾಧ್ಯತೆಯೂ ಇದೆ.

Must Read