ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಕಾಲದ ಗುಸುಗುಸು ಸುದ್ದಿಗೆ ಕೊನೆಗೂ ತೆರೆ ಬಿದ್ದಿದೆ! ಸಿನೆಮಾ ಪ್ರೇಮಿಗಳ ನೆಚ್ಚಿನ ಜೋಡಿಯಾದ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಈಗ ಅಧಿಕೃತವಾಗಿ ದಂಪತಿಗಳಾಗಿದ್ದಾರೆ. ಇಷ್ಟು ದಿನ ತಮ್ಮ ಪ್ರೀತಿಯನ್ನು ಗೌಪ್ಯವಾಗಿಟ್ಟಿದ್ದ ಈ ಸ್ಟಾರ್ ಜೋಡಿ, ಈಗ ರಾಜಸ್ಥಾನದ ಉದಯಪುರದಲ್ಲಿ ಬಹಳ ಖಾಸಗಿಯಾಗಿ ಮದುವೆ ಸಂಭ್ರಮವನ್ನು ಪೂರೈಸಿಕೊಂಡಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ನಡೆದ ಈ ವಿವಾಹ ಸಮಾರಂಭ ಅತ್ಯಂತ ರಹಸ್ಯವಾಗಿತ್ತು. ಮದುವೆಯ ಸ್ಥಳ ಮತ್ತು ದಿನಾಂಕವನ್ನು ಕುಟುಂಬದವರು ಗುಟ್ಟಾಗಿ ಇಟ್ಟಿದ್ದರು. ವಿಜಯ್ ದೇವರಕೊಂಡ ಯುವರಾಜನಂತೆ ಕಂಗೊಳಿಸಿದರೆ, ರಶ್ಮಿಕಾ ಮಂದಣ್ಣ ಯುವರಾಣಿಯಂತೆ ಮಿಂಚಿದರು. ಇಬ್ಬರ ಮದುವೆಯ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿವೆ.
ಮದುವೆಯ ಬಳಿಕ ಇದೇ ಮೊದಲ ಬಾರಿಗೆ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಉದಯಪುರದಿಂದ ಹೈದರಾಬಾದ್‌ಗೆ ಆಗಮಿಸಿದ ದಂಪತಿಯನ್ನು ಕಂಡು ಅಭಿಮಾನಿಗಳು ಸಂಭ್ರಮಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಅವರ ಮೊಗದಲ್ಲಿನ ನಗು ಮತ್ತು ಹೊಸ ಜೀವನದ ಸಂಭ್ರಮ ಎದ್ದು ಕಾಣುತ್ತಿತ್ತು.
ಹೈದರಾಬಾದ್‌ನ ಜುಬ್ಲಿ ಹಿಲ್ಸ್‌ನಲ್ಲಿರುವ ವಿಜಯ್ ದೇವರಕೊಂಡ ಅವರ ನಿವಾಸಕ್ಕೆ ರಶ್ಮಿಕಾ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಅನೇಕ ಬಾರಿ ಅವರು ಇಲ್ಲಿಗೆ ಭೇಟಿ ನೀಡಿದ್ದರೂ, ಈಗ ‘ಮನೆಯ ಸೊಸೆ’ಯಾಗಿ ಗಂಡನ ಮನೆಗೆ ಪ್ರವೇಶಿಸುತ್ತಿರುವ ಸಂಭ್ರಮ ವಿಶೇಷವಾಗಿತ್ತು. ಹಸೆಮಣೆ ಏರಿದ ಬಳಿಕ ರಶ್ಮಿಕಾ ಮಂದಣ್ಣ ನಗುನಗುತ್ತಾ ಮನೆಗೆ ತೆರಳುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.



