ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾ ರಾಜ್ಯದ ಜಗತಿಸಂಗ್‌ಪುರ ಜಿಲ್ಲೆಯಲ್ಲಿ 23 ವರ್ಷದ ಯುವತಿಯನ್ನು ಮದುವೆಯ ಭರವಸೆ ನೀಡಿ ಮನೆಬಿಟ್ಟು ಕರೆಸಿಕೊಂಡು ದೌರ್ಜನ್ಯ ಎಸಗಿ ಬಳಿಕ ಹತ್ಯೆ ಮಾಡಿದ ದಾರುಣ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮಾಹಿತಿ ಪ್ರಕಾರ, ಯುವತಿಯೊಂದಿಗೆ ಸ್ನೇಹ ಹೊಂದಿದ್ದ ವ್ಯಕ್ತಿ ದೇವಾಲಯದಲ್ಲಿ ಮದುವೆಯಾಗುವುದಾಗಿ ನಂಬಿಸಿ ಫೆಬ್ರವರಿ 22ರಂದು ಮನೆಬಿಟ್ಟು ಬರಲು ಹೇಳಿದ್ದ. ಬಳಿಕ ಏಕಾಂತ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ ರಹಾಮ ಬಸ್ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ.
ಇದನ್ನೂ ಓದಿ:
ಅಲ್ಲಿ ಒಂಟಿಯಾಗಿ ನಿಂತಿದ್ದ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಜಾರ್ಖಂಡ್ ಮೂಲದ ಮತ್ತೊಬ್ಬ ವ್ಯಕ್ತಿ ಸಂಪರ್ಕ ಸಾಧಿಸಿದ್ದಾನೆ. ಆತನಿಂದ ಪರದೀಪ್ ಪಟ್ಟಣದ ಬಾಡಿಗೆ ಮನೆಯಲ್ಲಿ ಮತ್ತೆ ದೌರ್ಜನ್ಯ ನಡೆದಿದೆ ಎಂದು ಆರೋಪಿಸಲಾಗಿದೆ. ಬಳಿಕ ಕಟ್ಟಡದ ಮೇಲ್ಛಾವಣಿಯಿಂದ ತಳ್ಳಿಹಾಕಿ ಕೊಲೆ ಮಾಡಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
ಮರುದಿನ ಬೆಳಿಗ್ಗೆ ಶವ ಪತ್ತೆಯಾಗಿದ್ದು, ಮೊದಲಿಗೆ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಲಾಗಿತ್ತು. ಆದರೆ ಕುಟುಂಬದ ದೂರಿನ ಮೇರೆಗೆ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಪ್ರಕರಣವಾಗಿ ಮರುದಾಖಲು ಮಾಡಲಾಗಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ.



