September 30, 2026
Wednesday, September 30, 2026
spot_img

ಶಾಲಾ ವ್ಯಾನ್‌ಗೆ ಪ್ಯಾಸೆಂಜರ್ ರೈಲು ಡಿಕ್ಕಿ: ಮೂವರ ದುರ್ಮ*ರಣ, 5 ಮಕ್ಕಳ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಶುಕ್ರವಾರ ಮುಂಜಾನೆ ಎದೆನಡುಗಿಸುವ ರೈಲು ಅಪಘಾತ ಸಂಭವಿಸಿದೆ. ಕರ್ಣಸುಬರ್ಣ ಮತ್ತು ಗೋಬಿಂದಾಪುರ ರೈಲ್ವೆ ನಿಲ್ದಾಣಗಳ ಮಧ್ಯದ ಲೆವೆಲ್ ಕ್ರಾಸಿಂಗ್‌ನಲ್ಲಿ ಪ್ಯಾಸೆಂಜರ್ ರೈಲೊಂದು ಶಾಲಾ ಮಕ್ಕಳಿದ್ದ ವ್ಯಾನ್ ಹಾಗೂ ಸೈಕಲ್ ಸವಾರನಿಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಈ ದುರಂತದಲ್ಲಿ ಇಬ್ಬರು ಮುಗ್ಧ ವಿದ್ಯಾರ್ಥಿಗಳು ಸೇರಿ ಮೂವರು ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದಾರೆ.

ರೈಲ್ವೆ ಗೇಟ್‌ಮನ್ ಸಿಬ್ಬಂದಿ ನಿರ್ಲಕ್ಷ್ಯ?

ನಿಮ್ಟಿತಾ-ಕಟ್ವಾ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಸಂಚರಿಸುವಾಗ ಕ್ರಾಸಿಂಗ್ ಗೇಟ್ ತೆರೆದೇ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗೇಟ್ ಮುಚ್ಚದ ಕಾರಣ ಹಳಿ ದಾಟಲು ಮುಂದಾದ ಶಾಲಾ ವಾಹನಕ್ಕೆ ವೇಗವಾಗಿ ಬಂದ ರೈಲು ಬಡಿದಿದೆ. ಅಪಘಾತದ ರಭಸಕ್ಕೆ ವ್ಯಾನ್ ಸಂಪೂರ್ಣ ನಜ್ಜುಗುಜ್ಜಾಗಿದೆ.

ಮಕ್ಕಳ ಸ್ಥಿತಿ ಗಂಭೀರ, ತನಿಖೆ ಆರಂಭ

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಐದಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ರಕ್ಷಿಸಿ ಸ್ಥಳೀಯ ಕರ್ಣಸುಬರ್ಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ವಿಷಮವಾಗಿರುವ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುರ್ಷಿದಾಬಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ಗೇಟ್ ತೆರೆದಿಡಲು ಕಾರಣರಾದ ಸಿಬ್ಬಂದಿಯ ಬೇಜವಾಬ್ದಾರಿತನದ ಬಗ್ಗೆ ಪೊಲೀಸರು ಹಾಗೂ ರೈಲ್ವೆ ಅಧಿಕಾರಿಗಳು ಜಂಟಿ ತನಿಖೆ ಕೈಗೊಂಡಿದ್ದಾರೆ.

Must Read