April 17, 2026
Friday, April 17, 2026
spot_img

ದರ್ಶನ್ ಕೇಸ್‌ನಲ್ಲಿ ಹೊಸ ಟ್ವಿಸ್ಟ್: ಪೊಲೀಸ್ ಅಧಿಕಾರಿಗಳ ಅಮಾನತಿಗೆ ಆಗ್ರಹಿಸಿ ಬೀದಿಗಿಳಿಯಲಿವೆ ಕನ್ನಡ ಸಂಘಟನೆಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಪರವಾಗಿ ಈಗ ದೊಡ್ಡ ಮಟ್ಟದ ಹೋರಾಟವೊಂದು ಆರಂಭವಾಗಿದೆ. ತನಿಖೆಯ ವೇಳೆ ಪೊಲೀಸರು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ರಾಜ್ಯ ರಾಜಧಾನಿಯಲ್ಲಿ ಪ್ರತಿಭಟನೆಯ ಬಿಸಿ ಏರಲಿದೆ.

ಎಸಿಪಿ ಚಂದನ್ ಮತ್ತು ಇನ್ಸ್‌ಪೆಕ್ಟರ್ ಗಿರೀಶ್ ನಾಯಕ್ ಅವರು ನಟ ದರ್ಶನ್ ವಿರುದ್ಧ ತನಿಖೆಯ ಹೆಸರಿನಲ್ಲಿ ‘ನಕಲಿ ದಾಖಲೆ’ಗಳನ್ನು ಸೃಷ್ಟಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ಕರ್ನಾಟಕ ಸಂಘಟನೆಗಳ ಕನ್ನಡ ಒಕ್ಕೂಟ ಮಾಡಿದೆ.

ಆರೋಪಿತ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು ಎಂಬುದು ಸಂಘಟನೆಯ ಮುಖ್ಯ ಬೇಡಿಕೆಯಾಗಿದೆ.

ಈ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 11ರ ಬುಧವಾರ ಬೆಳಿಗ್ಗೆ 11.30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಸಂಘಟನೆಯ ಪ್ರಮುಖರಾದ ನಟರಾಜ್ ಬೊಮ್ಮಸಂದ್ರ, “ನ್ಯಾಯ ಸಮ್ಮತವಾಗಿ ತನಿಖೆ ನಡೆಯಬೇಕೇ ಹೊರತು ಸುಳ್ಳು ದಾಖಲೆಗಳ ಮೂಲಕ ಯಾರನ್ನೂ ಸಿಲುಕಿಸಬಾರದು” ಎಂದು ಕಿಡಿಕಾರಿದ್ದಾರೆ. ಈ ಪ್ರತಿಭಟನೆಯು ದರ್ಶನ್ ಅಭಿಮಾನಿಗಳು ಮತ್ತು ವಿವಿಧ ಕನ್ನಡ ಪರ ಸಂಘಟನೆಗಳ ಬೆಂಬಲದೊಂದಿಗೆ ತೀವ್ರ ಸ್ವರೂಪ ಪಡೆಯುವ ಲಕ್ಷಣಗಳು ಕಾಣುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !