ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಅಂಗಳದಲ್ಲಿ ನಟಿ ದೀಪಿಕಾ ಪಡುಕೋಣೆ ಅವರ “ದಿನಕ್ಕೆ ಎಂಟು ಗಂಟೆ ಮಾತ್ರ ಕೆಲಸ” ಎಂಬ ನಿರ್ಧಾರ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿತ್ತು. ಚಿತ್ರೀಕರಣದ ವೇಳೆ ದೀಪಿಕಾ ಇಟ್ಟಿದ್ದ ಈ ‘ಖಡಕ್’ ಷರತ್ತಿನ ಬಗ್ಗೆ ಇದೀಗ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಪಾಡ್‌ಕಾಸ್ಟ್ ಒಂದರಲ್ಲಿ ಮಾತನಾಡಿದ ಕಂಗನಾ, “ದೀಪಿಕಾ ಅವರ ಈ ಬೇಡಿಕೆಯನ್ನು ವಿವಾದ ಮಾಡುವ ಅಗತ್ಯವೇ ಇಲ್ಲ. ಅವರು ಇಂದು ಭಾರತದ ನಂಬರ್ ಒನ್ ನಟಿ ಮಾತ್ರವಲ್ಲ, ಒಬ್ಬ ತಾಯಿ ಕೂಡ ಹೌದು. ಮಗು ಮತ್ತು ಕುಟುಂಬದ ಜವಾಬ್ದಾರಿ ಇರುವುದರಿಂದ ಕೆಲಸದ ಅವಧಿಯನ್ನು ಸೀಮಿತಗೊಳಿಸುವುದು ತಪ್ಪು ನಿರ್ಧಾರವಲ್ಲ,” ಎಂದು ದೀಪಿಕಾ ಪರ ಧ್ವನಿ ಎತ್ತಿದ್ದಾರೆ.
ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಕಂಗನಾ, “ವೃತ್ತಿಜೀವನದ ಆರಂಭದಲ್ಲಿ ನಾವು ಯಶಸ್ಸಿಗಾಗಿ ದಿನಕ್ಕೆ 12-14 ಗಂಟೆಗಳ ಕಾಲ ಸತತವಾಗಿ ದುಡಿದಿದ್ದೇವೆ. ಆದರೆ ಇಂದು ದೀಪಿಕಾ ಬೆಳೆದಿರುವ ಎತ್ತರಕ್ಕೆ ಅಂತಹ ಬೇಡಿಕೆ ಇಡುವ ಹಕ್ಕನ್ನು ಅವರು ಸಂಪಾದಿಸಿದ್ದಾರೆ. ವಯಸ್ಸು ಮತ್ತು ಅನುಭವದೊಂದಿಗೆ ಕೆಲಸ ಹಾಗೂ ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅನಿವಾರ್ಯ,” ಎಂದು ತಿಳಿಸಿದ್ದಾರೆ.
ಕೆಲಸದ ಅವಧಿಯ ಬಗ್ಗೆ ಚರ್ಚೆ ನಡೆಯುತ್ತಿದ್ದರೂ, ದೀಪಿಕಾ ಅವರ ಸಿನಿಮಾಗಳ ಕ್ರೇಜ್ ಕಿಂಚಿತ್ತೂ ಕಡಿಮೆಯಾಗಿಲ್ಲ. ಅಲ್ಲು ಅರ್ಜುನ್ ಜೊತೆಗಿನ ‘ರಾಕಾ’ ಹಾಗೂ ಶಾರುಖ್ ಖಾನ್ ಅವರ ‘ಕಿಂಗ್’ ನಂತಹ ಬೃಹತ್ ಚಿತ್ರಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ.



