ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ–ಇಸ್ರೇಲ್ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದಾರೆ ಎಂಬ ಘೋಷಣೆಯ ಬಳಿಕ ದೇಶದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ರಾಜ್ಯ ದೂರದರ್ಶನ ವಾಹಿನಿಯ ನಿರೂಪಕರೊಬ್ಬರು ಖಮೇನಿ ಸಾವಿನ ಸುದ್ದಿ ಓದುವಾಗ ಭಾವುಕರಾಗಿ ಕಣ್ಣೀರಿಟ್ಟ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆರಂಭದಲ್ಲಿ ದಾಳಿಯ ನಂತರ ಕೆಲ ಪ್ರದೇಶಗಳಲ್ಲಿ ಸಂಭ್ರಮಾಚರಣೆ ನಡೆದಿರುವ ವಿಡಿಯೋಗಳು ಹರಿದಾಡಿದ್ದವು. ಆದರೆ ರಾಜ್ಯ ಸಂಬಂಧಿತ ಸುದ್ದಿಸಂಸ್ಥೆಗಳು ಖಮೇನಿ ನಿಧನವನ್ನು ದೃಢಪಡಿಸಿದ ಬಳಿಕ ದುಃಖದ ವಾತಾವರಣ ನಿರ್ಮಾಣವಾಯಿತು. ಖಮೇನಿ ಮೂರು ದಶಕಕ್ಕೂ ಹೆಚ್ಚು ಕಾಲ ಇರಾನ್‌ನ ನಾಯಕತ್ವ ವಹಿಸಿದ್ದರು.
ಇದನ್ನೂ ಓದಿ:
ಸರ್ಕಾರವು 40 ದಿನಗಳ ರಾಷ್ಟ್ರೀಯ ಶೋಕಾಚರಣೆ ಹಾಗೂ ಏಳು ದಿನಗಳ ಸಾರ್ವಜನಿಕ ರಜೆ ಘೋಷಿಸಿದೆ. ಇದೇ ವೇಳೆ ಇರಾನ್ ಪಡೆಗಳು ಮಧ್ಯಪೂರ್ವದಲ್ಲಿರುವ ಅಮೆರಿಕ ಸೇನಾ ನೆಲೆಗಳತ್ತ ಪ್ರತಿದಾಳಿ ನಡೆಸಿದೆಯೆಂದು ವರದಿಯಾಗಿದೆ. ಕತಾರ್, ಕುವೈತ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬಹ್ರೇನ್ ಪ್ರದೇಶಗಳು ಗುರಿಯಾಗಿವೆ ಎನ್ನಲಾಗಿದೆ.
ಪ್ರದೇಶದಲ್ಲಿ ಉದ್ವಿಗ್ನತೆ ತೀವ್ರಗೊಂಡಿದ್ದು, ಮುಂದಿನ ಬೆಳವಣಿಗೆಗಳತ್ತ ಜಗತ್ತಿನ ಗಮನ ನೆಟ್ಟಿದೆ.



