March 2, 2026
Monday, March 2, 2026
spot_img

ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾ ಕೇಂದ್ರದ ಮೇಲೆ ಡ್ರೋನ್ ದಾಳಿ: ಜಾಗತಿಕ ತೈಲ ಮಾರುಕಟ್ಟೆ ಗಡಗಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಅಮೆರಿಕಾ–ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆಯೇ ಸೌದಿ ಅರೇಬಿಯಾದ ರಾಸ್ ತನುರಾ ತೈಲ ಸಂಸ್ಕರಣಾಗಾರ ಡ್ರೋನ್ ದಾಳಿಗೆ ಗುರಿಯಾಗಿದೆ. ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾ ಕೇಂದ್ರಗಳಲ್ಲೊಂದಾದ ಈ ಘಟಕದಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಸೌದಿ ಅರಾಮ್ಕೊ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.

ಪೂರ್ವ ಸೌದಿ ಅರೇಬಿಯಾದಲ್ಲಿರುವ ಈ ಘಟಕ ದಿನಕ್ಕೆ ಸುಮಾರು 5.5 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ದಾಳಿಯ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸಾವುನೋವುಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಹಾನಿಯ ಮೌಲ್ಯಮಾಪನ ಮುಂದುವರಿದಿದೆ.

ಇದನ್ನೂ ಓದಿ:

ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕಾ–ಇಸ್ರೇಲ್ ವೈಮಾನಿಕ ದಾಳಿ ನಡೆದ ಬಳಿಕ ಇರಾನ್ ಪ್ರತೀಕಾರ ಕ್ರಮವಾಗಿ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿದೆ ಎನ್ನಲಾಗಿದೆ. ರಾಸ್ ತನುರಾ ಮೇಲಿನ ದಾಳಿಯಲ್ಲಿ ಶಹೇದ್-136 ಡ್ರೋನ್ ಬಳಸಲಾಗಿದೆ ಎಂಬ ವರದಿಗಳಿವೆ.

ಈ ಘಟನೆಯಿಂದ ಜಾಗತಿಕ ತೈಲ ಬೆಲೆ 9–10% ಏರಿಕೆಯಾಗಿದೆ. ಸೌದಿ ಅರೇಬಿಯಾ ಪ್ರಮುಖ ರಫ್ತುದಾರವಾಗಿರುವುದರಿಂದ ಪೂರೈಕೆಗೆ ವ್ಯತ್ಯಯ ಉಂಟಾದರೆ ಭಾರತ ಸೇರಿದಂತೆ ಅನೇಕ ದೇಶಗಳಿಗೆ ಬೆಲೆ ಏರಿಕೆಯ ಭೀತಿ ಎದುರಾಗಬಹುದು. ಪರಿಣಿತರ ಪ್ರಕಾರ, ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಳ್ಳುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !