ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯದ ಪ್ರಮಾಣ (AQI) ದಿಢೀರನೆ ಹೆಚ್ಚಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ನೆರೆಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗಾಳಿಯ ಗುಣಮಟ್ಟ ತೀರಾ ಕಳಪೆ ಮಟ್ಟಕ್ಕೆ ತಲುಪಿದೆ ಎಂದು ವರದಿಗಳು ತಿಳಿಸಿವೆ. ನವೆಂಬರ್ 10ರ ಹವಾಮಾನ ಮಾಹಿತಿಯ ಪ್ರಕಾರ, ಕಲುಷಿತ ಗಾಳಿಯ ಕಾರಣದಿಂದಾಗಿ ಜನರಲ್ಲಿ ಆರೋಗ್ಯದ ಆತಂಕ ಹೆಚ್ಚಿದೆ.
ಚಿಕ್ಕಬಳ್ಳಾಪುರದಲ್ಲೇ ಗರಿಷ್ಠ ಮಾಲಿನ್ಯ
ಇಡೀ ರಾಜ್ಯದಲ್ಲೇ ಅತ್ಯಂತ ಕಳಪೆ ವಾಯು ಗುಣಮಟ್ಟ ಚಿಕ್ಕಬಳ್ಳಾಪುರದಲ್ಲಿ ದಾಖಲಾಗಿದೆ. ಇಲ್ಲಿನ ವಾಯು ಗುಣಮಟ್ಟ ಸೂಚ್ಯಂಕ (AQI) 143ಕ್ಕೆ ಏರಿದೆ. ಹಾಗೆಯೇ ರಾಜಧಾನಿ ಬೆಂಗಳೂರು 141 AQI ನೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಉಸಿರಾಟಕ್ಕೆ ಯೋಗ್ಯವಲ್ಲದ ಗಾಳಿ ಆವರಿಸಿಕೊಳ್ಳುತ್ತಿದೆ.
ಇತರ ಜಿಲ್ಲೆಗಳ ಸ್ಥಿತಿ
ಕೋಲಾರದಲ್ಲಿ 138, ದಾವಣಗೆರೆಯಲ್ಲಿ 136 ಹಾಗೂ ಹಾವೇರಿಯಲ್ಲಿ 129 AQI ದಾಖಲಾಗುವ ಮೂಲಕ ಈ ಭಾಗಗಳಲ್ಲೂ ಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ. ಇನ್ನು ಮೈಸೂರು ಮತ್ತು ಶಿವಮೊಗ್ಗದಲ್ಲೂ ಮಾಲಿನ್ಯ 121ರಷ್ಟಿದೆ. ಸಮಾಧಾನದ ಸಂಗತಿಯೆಂದರೆ ಬೆಳಗಾವಿ (76 AQI), ವಿಜಯಪುರ (77 AQI), ಬಾಗಲಕೋಟೆ ಮತ್ತು ಧಾರವಾಡದಲ್ಲಿ (ತಲಾ 83 AQI) ಪರಿಸ್ಥಿತಿ ತುಸು ಸುಧಾರಿಸಿದೆ. ಮಂಗಳೂರಿನಲ್ಲೂ 98ರಷ್ಟಿದ್ದು ಸದ್ಯಕ್ಕೆ ಸಮಾಧಾನಕರವಾಗಿದೆ.
ಇದನ್ನೂ ಓದಿ:
ಆರೋಗ್ಯದ ಮೇಲೆ ಏನು ಪರಿಣಾಮ?
ಮಾಲಿನ್ಯ ಹೆಚ್ಚಿರುವ ನಗರಗಳಲ್ಲಿ ವಾಸಿಸುವ ಮಕ್ಕಳು, ವಯಸ್ಸಾದವರು ಹಾಗೂ ಈಗಾಗಲೇ ಅಸ್ತಮಾದಂತಹ ಉಸಿರಾಟದ ಸಮಸ್ಯೆ ಇರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಧೂಳು ಹೆಚ್ಚಿರುವ ಕಡೆ ಓಡಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಅನಗತ್ಯವಾಗಿ ಹೊರಾಂಗಣದಲ್ಲಿ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸುವುದು ಒಳ್ಳೆಯದು.



