March 2, 2026
Monday, March 2, 2026
spot_img

ಖಮೇನಿ ಹತ್ಯೆಗೆ ಇರಾನ್ ಪ್ರತೀಕಾರ: ನೆತನ್ಯಾಹು ಕಚೇರಿ ಮೇಲೆ ಇರಾನ್ ಕ್ಷಿಪಣಿ ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಭೀಕರ ಸ್ವರೂಪ ಪಡೆದುಕೊಂಡಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಇಸ್ರೇಲ್ ಮತ್ತು ಅಮೆರಿಕದ ಜಂಟಿ ವಾಯು ದಾಳಿಯಲ್ಲಿ ಹತ್ಯೆಯಾದ ಬೆನ್ನಲ್ಲೇ, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಇಸ್ರೇಲ್ ಮೇಲೆ ಭೀಕರ ಪ್ರತೀಕಾರದ ದಾಳಿ ಆರಂಭಿಸಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯನ್ನು ಗುರಿಯಾಗಿಸಿಕೊಂಡು ಇರಾನ್ ‘ಖೈಬರ್’ ಕ್ಷಿಪಣಿಗಳ ಸುರಿಮಳೆಗೈದಿದೆ. ಇದರೊಂದಿಗೆ ಹೈಫಾದಲ್ಲಿರುವ ಮಿಲಿಟರಿ ಕೇಂದ್ರಗಳು ಮತ್ತು ಪೂರ್ವ ಜೆರುಸಲೆಮ್ ಮೇಲೆಯೂ ದಾಳಿ ನಡೆಸಲಾಗಿದ್ದು, ಇಡೀ ಪ್ರದೇಶ ಸ್ಫೋಟದ ಸದ್ದಿನಿಂದ ನಡುಗಿದೆ. “ಜಿಯೋನಿಸ್ಟ್ ಆಡಳಿತದ ಕ್ರಿಮಿನಲ್ ಪ್ರಧಾನಿ ಮತ್ತು ವಾಯುಪಡೆಯ ಕಮಾಂಡರ್ ಕಚೇರಿಗಳೇ ನಮ್ಮ ಗುರಿ” ಎಂದು ಇರಾನ್ ಬಹಿರಂಗವಾಗಿ ಘೋಷಿಸಿದೆ.

ಇರಾನ್‌ನಾದ್ಯಂತ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇದುವರೆಗೆ ಸುಮಾರು 555 ಜನರು ಬಲಿಯಾಗಿದ್ದಾರೆ ಎಂದು ರೆಡ್ ಕ್ರೆಸೆಂಟ್ ಸೊಸೈಟಿ ವರದಿ ಮಾಡಿದೆ. ಯುದ್ಧದ ತೀವ್ರತೆ ಕೇವಲ ಇಸ್ರೇಲ್‌ಗೆ ಸೀಮಿತವಾಗದೆ ದುಬೈ, ಬಹ್ರೇನ್ ಮತ್ತು ಇರಾಕ್‌ಗೂ ವ್ಯಾಪಿಸಿದೆ. ಸೌದಿ ಅರೇಬಿಯಾದ ಅತಿದೊಡ್ಡ ತೈಲ ಕಂಪನಿ ‘ಅರಾಮ್ಕೊ’ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿರುವುದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ.

ಕುವೈತ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಆವರಣದಲ್ಲಿ ಸ್ಫೋಟ ಸಂಭವಿಸಿದ್ದು, ದಟ್ಟವಾದ ಕಪ್ಪು ಹೊಗೆ ಆವರಿಸಿದೆ. ಅತ್ತ ಇರಾನ್ ಪಡೆಗಳು ಅಮೆರಿಕದ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದು, ಪೈಲಟ್‌ಗಳು ಪವಾಡಸದೃಶವಾಗಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಇರಾನ್ ಕೊಲ್ಲಿಯಲ್ಲಿ ಸತತ ಮೂರನೇ ದಿನವೂ ಸಂಘರ್ಷ ಮುಂದುವರಿದಿದ್ದು, ಪರಿಸ್ಥಿತಿ ನಿಯಂತ್ರಣ ಮೀರುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !