March 2, 2026
Monday, March 2, 2026
spot_img

ಅಂಕೋಲಾ ಪೊಲೀಸರ ಭರ್ಜರಿ ಬೇಟೆ: ಬ್ಯಾಂಕ್ ದರೋಡೆ ಸಂಚು ವಿಫಲ, ಐವರು ಅರೆಸ್ಟ್

ಹೊಸದಿಗಂತ ಅಂಕೋಲಾ:

ತಾಲೂಕಿನ ಸುಂಕಸಾಳದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯ ಮೇಲೆ ದರೋಡೆಗೆ ಯತ್ನಿಸಿದ್ದ ಐವರು ಆರೋಪಿಗಳನ್ನು ಅಂಕೋಲಾ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತರು ಕೇವಲ ಬ್ಯಾಂಕ್ ಮಾತ್ರವಲ್ಲದೆ, ತಾಲೂಕಿನ ಇತರೆಡೆ ನಡೆದಿದ್ದ ಸರಣಿ ಕಳ್ಳತನ ಪ್ರಕರಣಗಳಲ್ಲೂ ಭಾಗಿಯಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಬಂಧಿತರನ್ನು ಹಳವಳ್ಳಿಯ ವಿನಾಯಕ ಕಮಲಾಕರ ಸಿದ್ಧಿ(19), ರಾಜೇಶ ಲಕ್ಷ್ಮಣ ಸಿದ್ಧಿ(27), ಮಳಲಗಾವದ ಪ್ರಶಾಂತ ಅನಂತ ಸಿದ್ಧಿ(19), ಕಲ್ಲೇಶ್ವರದ ನಿಲೇಶ ಗಣಪತಿ ಸಿದ್ಧಿ(38) ಮತ್ತು ನಾಗೇಶ ಸುಬ್ರಾಯ ಸಿದ್ಧಿ(24) ಎಂದು ಗುರುತಿಸಲಾಗಿದೆ.

ಜನವರಿ 9 ರಿಂದ 12 ರ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿ 52 ರ ಪಕ್ಕದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯ ಶೌಚಾಲಯದ ಗೋಡೆಗೆ ಕನ್ನ ಕೊರೆದಿದ್ದ ಆರೋಪಿಗಳು, ಬ್ಯಾಂಕಿನ ಒಳಗಿನ ‘ಸ್ಟ್ರಾಂಗ್ ರೂಮ್’ ಗೋಡೆಯನ್ನು ಒಡೆಯಲು ಪ್ರಯತ್ನಿಸಿದ್ದರು. ರಾಷ್ಟ್ರೀಕೃತ ಬ್ಯಾಂಕಿನಲ್ಲೇ ದರೋಡೆಗೆ ಯತ್ನ ನಡೆದಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರು ನೀಡಿದ ದೂರಿನನ್ವಯ ತನಿಖೆ ಚುರುಕುಗೊಳಿಸಲಾಗಿತ್ತು.

ವಿಚಾರಣೆಯ ವೇಳೆ ಆರೋಪಿಗಳು ಇತರೆ ಎರಡು ಕಳ್ಳತನಗಳಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ.

ಹೆಗ್ಗಾರದ ಕಲ್ಪತರು ಸಹಕಾರಿ ಸಂಘದಲ್ಲಿ 8 ಸಾವಿರ ರೂ. ನಗದು ಕಳ್ಳತನ.

ಕನಕನಹಳ್ಳಿಯ ಅನ್ನಪೂರ್ಣ ಮಾರ್ಟ್‌ನಲ್ಲಿ 10 ಸಾವಿರ ರೂ. ನಗದು ಹಾಗೂ ದಿನಸಿ ಸಾಮಗ್ರಿಗಳ ಕಳ್ಳತನ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮೂರು ಬೈಕ್‌ಗಳು (ಎರಡು ಹೀರೋ, ಒಂದು ಬಜಾಜ್), ಒಂದು ಏಸರ್ ಕಂಪನಿಯ ಟ್ಯಾಬ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಅವರ ಮಾರ್ಗದರ್ಶನದಲ್ಲಿ, ಅಂಕೋಲಾ ಸಿಪಿಐ ಚಂದ್ರಶೇಖರ ಮಠಪತಿ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ತಂಡದಲ್ಲಿ ಪಿಎಸ್‌ಐಗಳಾದ ವಿಶ್ವನಾಥ ನಿಂಗೊಳ್ಳಿ, ಗುರುನಾಥ ಹಾದಿಮನಿ ಹಾಗೂ ಅಂಕೋಲಾ ಮತ್ತು ಯಲ್ಲಾಪುರ ಠಾಣೆಯ ಸಿಬ್ಬಂದಿಗಳು ಭಾಗವಹಿಸಿದ್ದರು. ಸದ್ಯ ಆರೋಪಿಗಳ ವಿರುದ್ಧ ತನಿಖೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !