March 2, 2026
Monday, March 2, 2026
spot_img

ದೈವದ ಅನುಕರಣೆ ಕೇಸ್: ನಟ ರಣವೀರ್ ಸಿಂಗ್‌ಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಸಂಬಂಧಿಸಿದಂತೆ ದೈವದ ಅನುಕರಣೆ ಮಾಡಿ ವಿವಾದಕ್ಕೆ ಸಿಲುಕಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಕರ್ನಾಟಕ ಹೈಕೋರ್ಟ್ ಮಾರ್ಚ್ 9ರವರೆಗೆ ರಿಲೀಫ್ ನೀಡಿದೆ.

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ರಣವೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು, ಪೊಲೀಸರು ನಟನ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂಬ ಆದೇಶವನ್ನು ವಿಸ್ತರಿಸಿದೆ.

ವಿಶೇಷವೆಂದರೆ, ಈ ಪ್ರಕರಣದಲ್ಲಿ ರಣವೀರ್ ಸಿಂಗ್ ಪರ ವಾದ ಮಂಡಿಸಬೇಕಿದ್ದ ಹಿರಿಯ ವಕೀಲರು ಸದ್ಯ ಯುದ್ಧದ ಕಾರಣದಿಂದಾಗಿ ಇಂಗ್ಲೆಂಡ್‌ನಲ್ಲೇ ಸಿಲುಕಿಕೊಂಡಿದ್ದಾರೆ. ವಿಮಾನಗಳ ಸಂಚಾರವಿಲ್ಲದ ಕಾರಣ ಅವರು ಭಾರತಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ ಎಂದು ಸಜನ್ ಪೂವಯ್ಯ ಅವರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಇತ್ತ ಸರ್ಕಾರದ ಪರ ಹೆಚ್ಚುವರಿ ಎಸ್‌ಪಿಪಿ ಬಿ.ಎನ್. ಜಗದೀಶ್ ಅವರು, “ನಟನಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು, ಅವರು ಕಾಲಾವಕಾಶ ಕೇಳಿದ್ದಾರೆ” ಎಂದು ತಿಳಿಸಿದರು.

ಕಳೆದ ವರ್ಷ ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ರಣವೀರ್ ಸಿಂಗ್, ‘ಕಾಂತಾರ’ ಚಿತ್ರದ ನಟನೆಯನ್ನು ಹೊಗಳುವ ಭರದಲ್ಲಿ ದೈವದ ನರ್ತನೆಯನ್ನು ಅನುಕರಿಸಿದ್ದರು. ಇದು ದೈವಕ್ಕೆ ಮಾಡಿದ ಅವಮಾನ ಎಂದು ಆಕ್ಷೇಪ ವ್ಯಕ್ತಪಡಿಸಿ ಅವರ ವಿರುದ್ಧ ದೂರು ದಾಖಲಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !