March 3, 2026
Tuesday, March 3, 2026
spot_img

ಕುವೈಟ್‌ನ ಎಲ್ಲ ಭಾರತೀಯರನ್ನೂ ಏರ್‌ಲಿಫ್ಟ್‌ ಮಾಡುವುದು ಕಷ್ಟಸಾಧ್ಯ, ಆದರೆ ಸೇಫ್‌ ಆಗಿದ್ದೇವೆ: ರಾಜ್ ಭಂಡಾರಿ

ಹೊಸದಿಗಂತ ವರದಿ ಮಂಗಳೂರು:

ಇರಾನ್ ದೇಶದ ಪರಮೋಚ್ಛ ನಾಯಕ ಆಯತೊಲ್ಲಾ ಆಲಿ ಖಮೇನಿ ಹತ್ಯೆ ಬಳಿಕ ಅಮೆರಿಕದ ಸೇನಾ ನೆಲೆಗಳು ಇರುವಂತಹ ಗಲ್ ರಾಷ್ಟ್ರಗಳ ಮೇಲೆ ಇರಾನ್ ಸತತವಾಗಿ ದಾಳಿ ನಡೆಸುತ್ತಿದೆ. ದುಬೈ, ಸೌದಿ ಅರೇಬಿಯಾ, ಕತಾರ್, ಕುವೈಟ್ ಮತ್ತಿತರ ದೇಶಗಳ ಮೇಲೆ ಇರಾನ್ ಬ್ಯಾಲೆಸ್ಟಿಕ್ ಡ್ರೋನ್, ಮಿಸೈಲ್‌ಗಳ ದಾಳಿ ನಡೆಸುತ್ತಿದೆ. ಈ ಬಗ್ಗೆ ಕುವೈಟ್‌ನ ಭಾರತೀಯ ಪ್ರವಾಸಿ ಪರಿಷದ್‌ನ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಘಟಕದ ಸಂಯೋಜಕರಾಗಿರುವ ರಾಜ್ ಭಂಡಾರಿ ತಿರುಮಲೆ ಗುತ್ತು ಮಾಹಿತಿ ನೀಡಿದ್ದಾರೆ.

ಕುವೈಟ್‌ನ ಜನರು ಒಂದಿಷ್ಟು ದಿಗಿಲುಗೊಂಡಿದ್ದರೂ ನಿತ್ಯ ಜೀವನ ಸಹಜ ಸ್ಥಿತಿಯಲ್ಲಿದೆ. ಇಲ್ಲಿನ ಸರಕಾರ ಸರ್ವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಇರಾನ್ ದಾಳಿಯಿಂದ ಕುವೈಟ್‌ನಲ್ಲಿ ಜನ ಜೀವನವೇನೂ ಅಸ್ತವ್ಯಸ್ತವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಸರಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು.

ಮಕ್ಕಳಿಗೆ ರಜೆ, ದೊಡ್ಡವರಿಗೆ ವರ್ಕ್‌ ಫ್ರಮ್‌ ಹೋಮ್‌

ಕಳೆದ ಎರಡು ದಿನಗಳಿಂದ ಶಿಕ್ಷಣ ಸಂಸ್ಥೆಗಳಿಗೆ ರಜೆಯನ್ನು ಸಾರಲಾಗಿದೆ. ಮಾ.2ರಿಂದ ಸರಕಾರಿ ಕಚೇರಿಗಳಲ್ಲಿ ಶೇ.30ರಷ್ಟು ಸಿಬಂದಿಗಳನ್ನು ಉಳಿಸಿಕೊಂಡು ಉಳಿದ ಶೇ.70ರಷ್ಟು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಎಟಿಎಂ, ಇಂಟರ್‌ನೆಟ್ ಸೇವೆಗಳು ಅಬಾಧಿತವಾಗಿದೆ. ಆದರೆ, ಬೀಚ್, ಮರಭೂಮಿ ಕಡೆ ಅನಗತ್ಯವಾಗಿ ತಿರುಗಾಟ ನಡೆಸದಂತೆ ಎಚ್ಚರ ನೀಡಲಾಗಿದೆ ಎಂದು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ.


ಯುದ್ಧದ ಛಾಯೆ ಇಲ್ಲ, ಜನ ಜೀವನ ಮಾಮೂಲಿ

ಕುವೈಟ್‌ನಲ್ಲಿ ಸುಮಾರು 10.50 ಲಕ್ಷ ಭಾರತೀಯರಿದ್ದಾರೆ. ಒಟ್ಟು ಗಲ್ ದೇಶಗಳಲ್ಲಿ ಸುಮಾರು 90 ಲಕ್ಷದಷ್ಟು ಭಾರತೀಯರಿದ್ದಾರೆ. ಇವರನ್ನೆಲ್ಲರನ್ನೂ ಭಾರತಕ್ಕೆ ಏರ್ ಲಿಫ್ಟ್ ಮಾಡುವುದು ಕಷ್ಟಸಾಧ್ಯ. ಈ ಹಿನ್ನಲೆಯಲ್ಲೇ ಆಯಾ ದೇಶಗಳು ಅಲ್ಲಿನ ನಿವಾಸಿಗಳ ಜೀವ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕುವೈಟ್‌ನಲ್ಲಿ ಜನ ಜೀವನ ಎಂದಿನಂತೆಯೇ ಇದೆ. ಇಲ್ಲಿ ಯಾವುದೇ ಯುದ್ಧದ ಛಾಯೆ ಕಾಣಿಸುವುದಿಲ್ಲ. ವಾಹನಗಳ ಓಡಾಟ ನಿರಾತಂಕವಾಗಿದೆ. ಅಂಗಡಿ ಮುಂಗಟ್ಟುಗಳು ನಿತ್ಯವೂ ತೆರೆದಿರುತ್ತದೆ. ಜನರು ಆತಂಕಪಡುವಂತಹ ಯಾವುದೇ ಕಾರಣ ಇಲ್ಲಿ ಕಂಡು ಬರುತ್ತಿಲ್ಲ. ಆದರೆ, ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದೆ. ಇದರಿಂದ ಪೂರ್ವ ನಿಗದಿತ ಮತ್ತು ತುರ್ತು ಪ್ರಯಾಣಕ್ಕೆ ಅಡಚಣೆ ಉಂಟಾಗಿದೆ ಎಂದು ಹೇಳುತ್ತಾರೆ ರಾಜ್ ಭಂಡಾರಿ.

ಮಿಸೈಲ್, ಡ್ರೋನ್‌ಗಳ ನಾಶ

ಕಳೆದ ಎರಡು ದಿನಗಳಲ್ಲಿ ಇರಾನ್ ಹಾರಿಸಿರುವ 97 ಬ್ಯಾಲೆಸ್ಟಿಕ್ ಮಿಸೈಲ್ ಮತ್ತು 283 ಡ್ರೋನ್‌ಗಳನ್ನು ಕುವೈಟ್ ಏರ್ ಡಿಫೆನ್ಸ್ -ರ್ಸ್ ತಡೆಗಟ್ಟುವಲ್ಲಿ ಮತ್ತು ನಾಶಪಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ. ಇರಾನ್ ದಾಳಿಯಲ್ಲಿ ಒಟ್ಟು 19 ಮಂದಿ ಗಾಯಗೊಂಡಿದ್ದು, ಈ ಪೈಕಿ ಓರ್ವ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಅಲ್ಲಿ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ ಎಂದಿದ್ದಾರೆ.

ಸುಳ್ಳು ಸುದ್ದಿಯಿಂದಲೇ ಭಯ ಜಾಸ್ತಿ

ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧಗಳ ಫೋಟೋ, ವೀಡಿಯೋಗಳು ಸಾಕಷ್ಟು ಹರಿದಾಡುತ್ತಿದೆ. ಇದರಲ್ಲಿ ಅನೇಕ ನಕಲಿ, ಎಐ ಸೃಷ್ಟಿಸಿರುವುದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವುದರಿಂದ ವಿದೇಶಗಳಲ್ಲಿರುವ ಭಾರತೀಯರ ಮನೆ ಮಂದಿ ಆತಂಕ, ಉದ್ವೇಗಕ್ಕೆ ಒಳಗಾಗುವಂತಾಗುತ್ತದೆ. ಈ ನಿಟ್ಟಿನಲ್ಲಿ ದಯವಿಟ್ಟು ಇಂತಹ ಸುಳ್ಳು ಸುದ್ದಿಗಳನ್ನು ಬಿತ್ತರಿಸಬೇಡಿ ಎಂದು ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !