March 3, 2026
Tuesday, March 3, 2026
spot_img

ಹಾರ್ಮುಜ್ ಜಲಸಂಧಿ ಬಂದ್: ಭಾರತದ ಬಳಿ ಎಷ್ಟು ತೈಲ ಸಂಗ್ರಹವಿದೆ? ಎಷ್ಟು ದಿನಕ್ಕೆ ಸಾಕು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಯುದ್ಧದ ವಾತಾವರಣದಿಂದಾಗಿ ಹಾರ್ಮುಜ್ ಜಲಸಂಧಿಯನ್ನು ಹಡಗು ಸಂಚಾರಕ್ಕೆ ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ತಿಳಿಸಿದ್ದು, ಇದರಿಂದ ಕಚ್ಚಾ ತೈಲ ಮತ್ತು ಅನಿಲದ ಪೂರೈಕೆ ಬಗ್ಗೆ ಆತಂಕ ಎದುರಾಗಿದೆ.

ಆದರೆ ಭಾರತಕ್ಕೆ ಯಾವುದೇ ಆತಂಕ ಇಲ್ಲ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿದ್ದು, ಕಚ್ಚಾ ತೈಲ, ಎಲ್‌ಪಿಜಿ ಮತ್ತು ಎಲ್‌ಎನ್‌ಜಿ ವಿಚಾರದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ಸದ್ಯ ದೇಶದಲ್ಲಿ 25 ದಿನಗಳಿಗೆ ಆಗುವಷ್ಟು ಕಚ್ಚಾ ತೈಲ ಮತ್ತು 25 ದಿನಗಳ ಉತ್ಪನ್ನಗಳ ದಾಸ್ತಾನು ಇದೆ ಎಂದು ಮೂಲಗಳು ತಿಳಿಸಿವೆ.

ಬದಲಾಗುತ್ತಿರುವ ಭೌಗೋಳಿಕ-ರಾಜಕೀಯ ಪರಿಸ್ಥಿತಿಯಿಂದ ಉಂಟಾಗುವ ಅಲ್ಪಾವಧಿಯ ಅಡೆತಡೆಗಳನ್ನು ನಿಭಾಯಿಸಲು ಭಾರತವು ಸಮರ್ಪಕವಾಗಿ ಸಿದ್ಧವಾಗಿದೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಭಾರತವು ಕಚ್ಚಾ ತೈಲದ ಜೊತೆಗೆ ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನದ ಸಾಕಷ್ಟು ಸಂಗ್ರಹವನ್ನು ಕಾಯ್ದುಕೊಂಡಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತವು ತನ್ನ ಕಚ್ಚಾ ತೈಲ ಮೂಲಗಳ ಕಾರ್ಯತಂತ್ರವನ್ನು ಗಣನೀಯವಾಗಿ ವೈವಿಧ್ಯಮಯಗೊಳಿಸಿದ್ದು, ಇಂಧನ ಪೂರೈಕೆಗಳು ಇದೀಗ ಪರ್ಯಾಯ ಮಾರ್ಗಗಳ ಮೂಲಕ ನಡೆಯುತ್ತಿವೆ. ಇದರಿಂದಾಗಿ ಹಾರ್ಮುಜ್ ಜಲಸಂಧಿಯ ಮೇಲಿನ ಅವಲಂಬನೆ ಕಡಿಮೆಯಾಗಿದೆ. ಪ್ರಸ್ತುತ ದಾಸ್ತಾನು ಪರಿಸ್ಥಿತಿ ಸಮರ್ಪಕ ಹಾಗೂ ಆರಾಮದಾಯಕವಾಗಿದೆ ಎಂದು ಸರ್ಕಾರ ತಿಳಿಸಿದ್ದು, ಗ್ರಾಹಕರ ಹಿತಾಸಕ್ತಿ ಕಾಪಾಡುವುದು ಮೊದಲ ಆದ್ಯತೆಯಾಗಿದೆ ಎಂದು ಒತ್ತಿ ಹೇಳಿದೆ.

ಸದ್ಯಕ್ಕೆ ಗ್ರಾಹಕರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಕೆಯನ್ನು ಕಾಣುವ ಸಾಧ್ಯತೆಯಿಲ್ಲ. ಆದರೆ, ಮುಂಬರುವ ದಿನಗಳಲ್ಲಿ ಹಾರ್ಮುಜ್ ಜಲಸಂಧಿಯಲ್ಲಿನ ಪರಿಸ್ಥಿತಿ ಹೇಗೆ ತಿರುವು ಪಡೆಯಲಿದೆ ಎಂಬುದರ ಮೇಲೆ ಮುಂದಿನ ನಿರ್ಧಾರಗಳು ಅವಲಂಬಿತವಾಗಿವೆ.

ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದರಿಂದ, ಸುಮಾರು 90% ಕಚ್ಚಾ ತೈಲ ಸಾಗಾಟ ಸ್ಥಗಿತಗೊಂಡಿದೆ. ಸಾಮಾನ್ಯವಾಗಿ 100ಕ್ಕೂ ಹೆಚ್ಚು ಹಡಗುಗಳು ಸಂಚರಿಸುತ್ತಿದ್ದ ಈ ಮಾರ್ಗದಲ್ಲಿ, ಭಾನುವಾರ ಕೇವಲ ಮೂರು ಟ್ಯಾಂಕರ್‌ಗಳು ಮಾತ್ರ ಹಾದುಹೋಗಲು ಸಾಧ್ಯವಾಯಿತು. ಸೋಮವಾರ ಈ ಸಂಖ್ಯೆ ಒಂದಕ್ಕೆ ಇಳಿದಿದೆ. ಸದ್ಯ, 700ಕ್ಕೂ ಹೆಚ್ಚು ಟ್ಯಾಂಕರ್‌ಗಳು ಜಲಸಂಧಿಯ ಎರಡೂ ಬದಿಗಳಲ್ಲಿ ಸಿಲುಕಿಕೊಂಡಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !